ಅಂಗನವಾಡಿ ಆವರಣದಲ್ಲಿ ಪಾಚಿ, ಮಕ್ಕಳ ಆಟೋಟಕ್ಕಿಲ್ಲ ಆಸ್ಪದ

10 SRT STORY1
Published on

ಉದಯಕುಮಾರ ಹಣಗಿ ಶಿರಹಟ್ಟಿ
ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣದ ಜತೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕಾದ ಅಂಗನವಾಡಿ ಕೇಂದ್ರಗಳು ನೂರೆಂಟು ಸಮಸ್ಯೆಗಳ ಮಧ್ಯೆ ಕಾರ್ಯನಿರ್ವಹಿಸುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯಾವುದೇ ಪ್ರಯತ್ನಗಳೂ ಆಗುತ್ತಿಲ್ಲ.
ತಾಲೂಕಿನಲ್ಲಿ ಒಟ್ಟು 120 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಗ್ರಾಮೀಣ 103 ನಗರ 17 ಅಂಗನವಾಡಿ ಕೇಂದ್ರಗಳ ಪೈಕಿ ಬಾಡಿಗೆ 12, ಸರ್ಕಾರಿ ಕಟ್ಟಡದಲ್ಲಿ 101 ಇತರೆ ಕಟ್ಟಡಗಳಲ್ಲಿ 7 ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಶಿರಹಟ್ಟಿ ಪಟ್ಟಣದಲ್ಲಿ 17 ಅಂಗನವಾಡಿ ಕೇಂದ್ರಗಳಿದ್ದು, 3ನೇ ವಾರ್ಡಿನ ಮ್ಯಾಗೇರಿ ಓಣಿ ಮತ್ತು 15ನೇ ವಾರ್ಡಿನ ಅಂಬೇಡ್ಕರ್ ಓಣಿಯಲ್ಲಿ ಬರುವ ಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ.
ಸತತ ಮಳೆಯಿಂದ ಎರಡು ಅಂಗನವಾಡಿಗಳ ಸುತ್ತಮುತ್ತ ನೀರು ನಿಂತಿದೆ. ವಾತಾವರಣ ಕೆಸರಿನಿಂದ ಕೂಡಿದೆ. ಪಕ್ಕದಲ್ಲಿಯೇ ಇರುವ ಚರಂಡಿ ನೀರಿನಿಂದ ಸೊಳ್ಳೆಗಳ ತಾಣವಾಗಿ ಪರಿಣಮಿಸಿ ಮಕ್ಕಳಿಗೆ ಅನಾರೋಗ್ಯದ ಭೀತಿ ಕಾಡುತ್ತಿದೆ. ಇನ್ನು ಅಂಗನವಾಡಿ ಅಕ್ಕಪಕ್ಕದಲ್ಲಿ ಜಾನುವಾರುಗಳನ್ನು ಕಟ್ಟಿರುತ್ತಾರೆ. ಇದರಿಂದ ಮಕ್ಕಳ ಆಟೋಟಕ್ಕೆ ಆಸ್ಪದ ಇಲ್ಲದಂತಾಗಿದೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.
ಮ್ಯಾಗೇರಿ ಓಣಿಯ ಅಂಗನವಾಡಿ ಕೇಂದ್ರದ ಮುಂದೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಶಿಥಿಲಾವಸ್ಥೆಗೆ ತಲುಪಿದ್ದ ಹಳೆಯ ನೀರಿನ ಟ್ಯಾಂಕ್ ಸಮಸ್ಯೆ ಬಗ್ಗೆ ಹಿಂದೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದಾಗ ಪಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಳೆಯ ನೀರಿನ ಟ್ಯಾಂಕ್ ತೆರವು ಮಾಡಿದ್ದರು. ಆದರೆ ಈಗ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕದ ನೀರು ಅಂಗನವಾಡಿ ಕೇಂದ್ರ ಮುಂದೆ ಹರಿಯುತ್ತಿರುವುದು ಮಕ್ಕಳಿಗೆ ಸಮಸ್ಯೆಯಾಗಿದೆ.
ಮಕ್ಕಳಿಗೆ ಗುಣಮಟ್ಟದ ಆಹಾರದ ಕೊರತೆಯ ಬಗ್ಗೆ ಜನರು ದೂರುತ್ತಾರೆ. ಮಕ್ಕಳಿಗೆ ನೀಡುವ ಆಹಾರದ ಕೊಠಡಿಯಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ನೀರು ಶುದ್ಧೀಕರಿಸುವ ಯಂತ್ರಗಳು ಸ್ಥಗಿತಗೊಂಡಿವೆ. ಮಕ್ಕಳು ಮನೆಯಿಂದ ನೀರು ತರುತ್ತಾರೆ. ಸ್ವಚ್ಛತೆ, ಗುಣಮಟ್ಟದ ಆಹಾರದ ಬಗ್ಗೆ ಅಧಿಕಾರಿ ಗಮನ ಹರಿಸಬೇಕಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕೇಳಿದ್ದೇವೆ. ಗ್ರಾಮೀಣ ಭಾಗದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಸರ್ಕಾರಿ ಕಟ್ಟಡ ಅಂಗವಾಡಿ ಕೇಂದ್ರಕ್ಕೆ ನಳ ನೀಡಿದ್ದಾರೆ. ಅದರೆ ನೀರು ಬರುತ್ತಿಲ್ಲ. ಪಪಂಗೆ ಅಂಗನವಾಡಿ ಕೇಂದ್ರದ ಸುತ್ತುಮುತ್ತ ಸ್ವಚ್ಛತೆ ಮಾಡಲು ಮನವಿ ಮಾಡಿದ್ದೇವೆ.-ಮೃತ್ಯುಂಜಯ ಗುಡ್ಡದಾನ್ವೇರಿ, ಸಿಡಿಪಿಒ, ಶಿರಹಟ್ಟಿ ಕುರುಬರ ಓಣಿ ಅಂಗನವಾಡಿ ಕೇಂದ್ರ ಮಾಗೇರಿ ಓಣಿಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಮಾಗೇರಿ ಓಣಿಯ ಅಂಗನವಾಡಿ ಕೇಂದ್ರ ಬಾಡಿಗೆ ಕಟ್ಟಡದಲ್ಲಿದೆ. ಪಟ್ಟಣದ ಅಂಗನವಾಡಿ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನ ನೀಡಬೇಕು.-ಸಂತೋಷ ಕುರಿ ಪಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net