

ಬೇಲೂರು: ರಾಜ್ಯದ ವಿವಿಧೆಡೆ ನಡೆದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಬಹುಮಾನದೊಂದಿಗೆ ಹಲವಾರು ಪ್ರಶಸ್ತಿ ಪಡೆದಿದ್ದ ಸಲಗ ಹೆಸರಿನ ಹೋರಿ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಬೇಲೂರು ತಾಲೂಕಿನ ಡಣಾಯಕನಹಳ್ಳಿ ಗ್ರಾಮದ ರಾಮಯ್ಯ ಎಂಬುವರು ಸಾಕಿದ್ದ 4 ಹಲ್ಲಿನ ಸಲಗ ಎಂಬ ಹೆಸರಿನ ಹೋರಿಯು ರಾಜ್ಯದ ವಿವಿಧೆಡೆ ನಡೆದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಲಕ್ಷಾಂತರ ರೂ. ನಗದು ಬಹುಮಾನದೊಂದಿಗೆ ಹಲವಾರು ಪ್ರಶಸ್ತಿ ಪಡೆದು ನೂರಾರು ಅಭಿಮಾನಿಗಳನ್ನು ಹೊಂದಿತ್ತು.
ಹೋರಿಯನ್ನು ಮಾಲೀಕರು 60 ಸಾವಿರ ರೂ.ಗೆ ಖರೀದಿಸಿ ತಂದಿದ್ದರು. ನಂತರ ಹೋರಿಯನ್ನು ಜೋಡಿ ಎತ್ತಿನಗಾಡಿ ಓಟಕ್ಕೆ ಸಿದ್ಧಪಡಿಸಿ ಪ್ರಥಮವಾಗಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯ ಹಿಂದೆ ಸಾಗಿತ್ತು.ಕೆಲ ದಿನಗಳ ಹಿಂದೆ ಹಿರೇಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಚಾಂಪಿಯನ್‌ಶಿಪ್ ಗೆದ್ದಿತ್ತಲ್ಲದೆ, ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹತ್ತು ಹಲವು ಬಹುಮಾನ ಗಳಿಸಿತ್ತು.
ಚಾಂಪಿಯನ್ ಹೋರಿಯನ್ನು ಕೆಲವು ದಿನಗಳ ಹಿಂದೆ ಮಂಡ್ಯದವರೊಬ್ಬರು 5 ಲಕ್ಷ ರೂ.ಗೆ ಖರೀದಿಸಲು ಮುಂದಾಗಿದ್ದರು. ಆದರೆ ಮಾಲೀಕರು, ಅಭಿಮಾನಿಗಳು ಮಾರಾಟ ಮಾಡಲು ನಿರಾಕರಿಸಿದ್ದರು. ಆದರೆ ದುರದೃಷ್ಟವಶಾತ್ ಹೋರಿ ಭಾನುವಾರ ಬೆಳಗ್ಗೆ ಅನಾರೋಗ್ಯದಿಂದ ಡಣಾಯಕನಹಳ್ಳಿ ಗ್ರಾಮದಲ್ಲಿ ಮೃತಪಟ್ಟಿದೆ.
ಮೃತ ಸಲಗ ಹೋರಿಯನ್ನು ಅಭಿಮಾನಿಗಳು ಮತ್ತು ಗ್ರಾಮಸ್ಥರು ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಅಂತ್ಯಕ್ರಿಯೆ ಮಾಡಿದರು.