ರಸ್ತೆ ಹೊಂಡ ಮುಚ್ಚಲೂ ದುಡ್ಡಿಲ್ಲ!

YLP ROAD
Published on

ಯಲ್ಲಾಪುರ: ಸರ್ಕಾರ ಉದಾರವಾಗಿ ಐದು ಗ್ಯಾರಂಟಿ ಯೋಜನೆಯನ್ನೇನೊ ಕೊಟ್ಟಿದೆ. ಆದರೆ, ನಮ್ಮ ಊರಿಗೆ ಪಂಚ ಗ್ಯಾರಂಟಿ ಜತೆಗೆ ಆರನೆಯದಾಗಿ ‘ಹೊಂಡ’ ಗ್ಯಾರಂಟಿಯೂ ಸಿಕ್ಕಿಬಿಟ್ಟಿದೆ. ಇದರಿಂದ ಹೈರಾಣಾಗಿದ್ದೇವೆ. ದಯವಿಟ್ಟು ಹೊಂಡ ಗ್ಯಾರಂಟಿಯಿಂದ ಪಾರುಮಾಡಿ…
ಇದು ತಾಲೂಕಿನ ಬಿಸಗೋಡ ಗ್ರಾಮದ ಜನರ ಬೇಡಿಕೆ. ಮೇಲ್ನೋಟಕ್ಕೆ ಇದರಲ್ಲಿ ವ್ಯಂಗ್ಯವಿದ್ದರೂ ವಾಸ್ತವದಲ್ಲಿ ವಿಷಯ ಗಂಭೀರವಾಗಿಯೇ ಇರುವುದು ಸಮಸ್ಯೆಯನ್ನು ಕಣ್ಣಾರೆ ಕಂಡಾಗ ಖಾತ್ರಿಯಾಗುತ್ತದೆ!

ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಬಿಸಗೋಡ ಕ್ರಾಸ್‌ನಿಂದ ಬಿಸಗೋಡವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಅವ್ಯವಸ್ಥೆಯಿಂದ ಬೇಸತ್ತು ಯಾರೋ ಶನಿವಾರ ರಾತ್ರಿ ರಸ್ತೆಯ ಹೊಂಡದಲ್ಲಿ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸಗೋಡ ಕ್ರಾಸ್‌ನಿಂದ ಬಿಸಗೋಡವರೆಗಿನ 2 ಕಿಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ.

ಜಿಪಂ ಇಂಜನಿಯರಿಂಗ್ ವಿಭಾಗಕ್ಕೆ ಸೇರಿದ ಈ ರಸ್ತೆ ಅವ್ಯವಸ್ಥೆಯ ಕಾರಣಕ್ಕಾಗಿ ಬಸ್ ಸಂಚಾರ ಕಷ್ಟವಾಗಿದೆ. ಬಸ್ ಹಾಳಾಗುವ ಭಯದಿಂದ ಚಾಲಕರು ಬಿಸಗೋಡಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಇದರಿಂದ ಆ ಭಾಗದ ಪ್ರಯಾಣಿಕರು ಎರಡು ಕಿಮೀ ನಡೆದುಕೊಂಡೇ ಹೋಗಬೇಕಾಗಿದೆ.
ಬಿಸಗೋಡ ಪ್ರೌಢಶಾಲೆಗೆ ಹೋಗುವ ಆನಗೋಡ, ದೇಹಳ್ಳಿ ಭಾಗದ ನೂರಾರು ವಿದ್ಯಾರ್ಥಿಗಳು ಬಸ್‌ಅನ್ನೇ ಆಶ್ರಯಿಸಿದ್ದಾರೆ. ಊರಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗೆ ಬಸ್‌ನಲ್ಲಿ ಬರುವ ಶಿಕ್ಷಕರಿದ್ದಾರೆ. ರಸ್ತೆ ದುರವಸ್ಥೆಯಿಂದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ.

ಪ್ರತಿ ವರ್ಷ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ಮಾಡಲಾಗುತ್ತದೆಯಾದರೂ, ಮಳೆಗಾಲದಲ್ಲಿ ಆ ಭಾಗದಲ್ಲಿ ದೊಡ್ಡ ಹೊಂಡಗಳು ಉಂಟಾಗುವುದು ಸಾಮಾನ್ಯ. ಕಾಮಗಾರಿಯೇ ಕಳಪೆಯಾಗಿ ನಡೆಯುತ್ತಿರಬಹುದು ಅಥವಾ ಆ ಭಾಗದ ವಾತಾವರಣವೇ ಆ ರೀತಿ ಇರಬಹುದು ಎಂಬ ಅಭಿಪ್ರಾಯ ಸ್ಥಳೀಯರದು. ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಿದರೆ ಒಂದೆರಡು ವರ್ಷಗಳ ಕಾಲವಾದರೂ ಬಾಳಿಕೆ ಬರಬಹುದು ಎನ್ನುತ್ತಾರೆ ಸ್ಥಳೀಯರು.

ಈ ವರ್ಷವೂ ಹೊಂಡ ಮುಚ್ಚಿ, ನಿಧಾನವಾಗಿಯಾದರೂ ಸಂಚರಿಸಬಹುದಾದ ಅನುಕೂಲತೆ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಆದರೂ ಸರ್ಕಾರ ಮಾಡಿಕೊಟ್ಟಿಲ್ಲ. ಏಕೆಂದರೆ, ಸರ್ಕಾರ ರಸ್ತೆ ಹೊಂಡ ಮುಚ್ಚಲು ಹಣವನ್ನೇ ಕೊಡುತ್ತಿಲ್ಲ. ಪಂಚ ಗ್ಯಾರಂಟಿಯಿಂದಾಗಿ ಅಭಿವೃದ್ಧಿಗೆ ಹಣ ನೀಡಲಾಗದ ದುಸ್ಥಿತಿಗೆ ಸರ್ಕಾರ ತಲುಪಿದೆ, ಖಜಾನೆ ಖಾಲಿ ಖಾಲಿಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಅನುದಾನ ಕೊರತೆ ಎಂಬ ಕಹಿ ಸತ್ಯ ಕೇಳಿದ ಜನರಿಗೆ ಆರನೇ ಗ್ಯಾರಂಟಿ (ರಸ್ತೆ ಹೊಂಡ) ಇನ್ನೆಷ್ಟು ಕಾಲ ತಮ್ಮನ್ನು ಕಾಡುತ್ತದೆಯೋ ಎಂಬ ಚಿಂತೆ ಹೆಚ್ಚಾಗಿದೆ.

ಸರ್ಕಾರ ಅನುದಾನ ಬಿಡುಗಡೆ ಮಾಡಿ ರಸ್ತೆ ಸರಿ ಮಾಡಿಸುತ್ತದೆಯೋ ಅಥವಾ ಹೊಂಡಗಳಲ್ಲಿ ಯಾರೋ ನೆಟ್ಟಿರುವ ಗಿಡಗಳು ಅಲ್ಲಿಯೇ ಬೇರು ಬಿಡುತ್ತವೆಯೋ ಎನ್ನುವುದು ಕುತೂಹಲ ಮೂಡಿಸಿದೆ.

ಬಸ್ ಚಾಲಕರ ಪ್ರಶ್ನೆ

ಬಸ್ ಸಂಚಾರ ಪುನರಾರಂಭಿಸುವಂತೆ ಕೆಲ ಗ್ರಾಮಸ್ಥರು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಒತ್ತಡ ಹೇರುವ ಪ್ರಯತ್ನವನ್ನೂ ನಡೆಸಿದ್ದಾರೆ. ಕೆಟ್ಟ ರಸ್ತೆಯಲ್ಲಿ ಬಸ್ ಚಲಾಯಿಸಿ, ಪದೇ ಪದೆ ಹಾಳಾಗುವಂತಾದರೆ ಅದಕ್ಕೆ ನಮ್ಮನ್ನೇ ಹೊಣೆಯಾಗಿಸಲಾಗುತ್ತದೆ. ನಮ್ಮ ಸಮಸ್ಯೆ ಕೇಳುವವರಾರು? ದುರಸ್ತಿ ಬಗ್ಗೆ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸುವುದನ್ನು ಬಿಟ್ಟು, ಬಸ್ ಬಿಡುವಂತೆ ಒತ್ತಡ ತರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಚಾಲಕರ ಪ್ರಶ್ನೆ.

ರಸ್ತೆಯ ಅವ್ಯವಸ್ಥೆ ಬಗ್ಗೆ ನಮ್ಮ ಗಮನದಲ್ಲಿದೆ. ಆದರೆ, ಇಂತಹ ಯಾವುದೇ ಕಾಮಗಾರಿಗೆ ಸದ್ಯ ಅನುದಾನ ಲಭ್ಯವಿಲ್ಲ. ಸರ್ಕಾರದಿಂದ ಅನುದಾನ ಬಂದ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.ಅಶೋಕ ಬಂಟ ಎಇಇಜಿ.ಪಂ ಇಂಜನಿಯರಿಂಗ್ ಉಪವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net