

ಟಿ.ಶ್ರೀನಿವಾಸ್, ಹೊನ್ನಾಳಿ
ವಯಸ್ಸಾಗಿದೆ ಮೈಯಲ್ಲಿ ಕಸುವಿಲ್ಲ.,ಮನೆ ಬಾಡಿಗೆ ಕಟ್ಟಲು ಕೈಯಲ್ಲಿ ಕಾಸಿಲ್ಲ., ತಿಂಗಳಿಗೊಮ್ಮೆ ಬರುತ್ತಿದ್ದ ಮಾಸಾಶನ ನಿಂತು ಮೂರು ವರ್ಷ ಕಳೆದಿವೆ.
ಗಂಡ ಸತ್ತು ಮೂವತ್ತು ವರ್ಷ ಆಗಿವೆ. ನನ್ನ ಪಾಲಿಗೆ ನನ್ನವರೆಂದು ಯಾ ರೂ ಇಲ್ಲ. ಮಕ್ಕಳಿಲ್ಲದ ಒಬ್ಬಂಟಿ ನಾನು. ಎಷ್ಟೇ ಕಷ್ಟ ಬಂದರೂ ಸ್ವಾಭಿಮಾನ ಬಿಟ್ಟು ಬದುಕಿಲ್ಲ.
ಸ್ವಂತ ಸೂರಿಲ್ಲದೆ ನಾ ಹೇಗೆ ಬದುಕಲಿ? ಸದ್ಯಕ್ಕೆ ಬಸ್ ತಂಗುದಾಣವೇ ನನಗೆ ಮಹಾಮನೆ. ಬೀದಿ ದೀಪವೇ ಬೆಳಕು. ಬಿಸಿಲು, ಮಳೆ, ಚಳಿ ಏನೇ ಬಂದರೂ ಅಲ್ಲಿಯೇ ದಿನ ಕಳೆಯುತ್ತೇನೆ. ಕೂಲಿನಾಲಿ ಮಾಡಿ ಅನ್ನ ಬೇಯಿಸಿಕೊಳ್ಳುತ್ತೇನೆ.
ಈ ಅನಾಥೆಗೊಂದು ಸೂರು ಕೊಡಿ ಎಂದು ಅಂಗಲಾಚಿದರೂ ನನ್ನ ಕೂಗು ಯಾರಿಗೂ ಕೇಳಿಲ್ಲ. ಹೀಗೆಂದು ಕಣ್ಣೀರಿನ ಕಥೆ ತೆರೆದಿಟ್ಟವರು ಹೊನ್ನಾಳಿ ತಾಲೂಕು ಕೆಂಗಲಹಳ್ಳಿಯಲ್ಲಿ ವಾಸವಿರುವ 60 ವರ್ಷದ ವೃದ್ಧೆ ಜಯಮ್ಮ! ಹೊನ್ನಾಳಿ ತಾಲೂಕಿನ ಬನ್ನಿಕೋಡು ಗ್ರಾಮದ ಜಯಮ್ಮ ಅವರನ್ನು ಚನ್ನಗಿರಿ ತಾಲೂಕು ಕತ್ತಲೆಗೆರೆ ಗ್ರಾಮದ ನಾಗರಾಜಪ್ಪ ಎಂಬುವರಿಗೆ ಮದುವೆ ಮಾಡಿ ಕೊಡ ಲಾಗಿತ್ತು. ಗಂಡ ತೀರಿ ಹೋದರು. ಪತಿ ನಿಧನರಾದ ಬಳಿಕ ತವರುಮನೆ, ಗಂಡನ ಮನೆ ಎರಡೂ ಕಡೆ ಇರದೆ ಕೆಂಗಲಹಳ್ಳಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ಗೌರವದಿಂದ ಬದುಕಿದ ಜೀವವದು.
ಹೊಲ, ಗದ್ದೆಗಳಲ್ಲಿ ಕೂಲಿ ನಾಲಿ ಮಾಡಿ ಬಂದ ಹಣದಲ್ಲಿ ಬಾಡಿಗೆ ಪಾವತಿಸಿ ಅಡುಗೆ ಬೇಯಿಸಿಕೊಂಡು ತಿಂದು ತಮ್ಮಷ್ಟಕ್ಕೆ ತಾವಿದ್ದರು. ವೃದ್ಯಾಪ್ಪ ಬಂದಿದ್ದರಿಂದ ಮೊದಲಿನಂತೆ ಹೊಲ,ಮನೆ ಕೆಲಸ ಮಾಡುವ ಶಕ್ತಿ ಇಲ್ಲ.
ಹೀಗಾಗಿ ಕೆಲ ವರ್ಷಗಳಿಂದ ಬಾಡಿಗೆ ಹಣ ಹೊಂದಿಸಲು ಕಷ್ಟವಾಗತೊಡಗಿತು. ಆಗ ಆಯ್ಕೆ ಮಾಡಿಕೊಂಡಿದ್ದೇ ಗ್ರಾಮದ ಬಸ್ ತಂಗುದಾಣವನ್ನು. ಅಜ್ಜಿಯ ಕಷ್ಟ ಅರಿತಿದ್ದ ಗ್ರಾಮಸ್ಥರು ಕೂಡ ಅಲ್ಲಿ ವಾಸಕ್ಕೆ ಅಡ್ಡಿಪಡಿಸಲಿಲ್ಲ. ಕೂಲಿ ನಾಲಿ ಮಾಡಿ ಅಷ್ಟೋ- ಇಷ್ಟೋ ದುಡಿದು ಕುಂದೂರಿನ ಕರ್ನಾಟಕ ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಅದರಿಂದ ಬರುವ ಬಡ್ಡಿಯಲ್ಲೇ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ.
ಬಸ್ ತಂಗುದಾಣದ ಪಕ್ಕದಲ್ಲೇ ನಿತ್ಯ ಅಡುಗೆ ಮಾಡಿಕೊಳ್ಳುತ್ತಾರೆ. ವಿಧವಾ ವೇತನ, ಸೂರು ಕೊಡಿಸಿ ಎಂದು ಕಂಡ, ಕಂಡ ಅಧಿಕಾರಿಗಳಿಗೆ ಕೈಮುಗಿದರೂ ಸ್ಪಂದಿಸಿಲ್ಲ ಎಂದು ಈ ಹಿರಿಯ ಜೀವ ಕೊರಗಿದೆ.
ಸೂರಿಗೆ ಮೊರೆ ಇಟ್ಟರೂ ಸ್ಥಳೀಯ ಗ್ರಾಪಂ ಪಿಡಿಒ, ತಾಪಂ ಇಒ ಅಥವಾ ಇತರ ಅಧಿಕಾರಿಗಳರೂ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ದೂರುತ್ತಿದ್ದಾರೆ ಗ್ರಾಮಸ್ಥರು.
ಕೆಲ ತಿಂಗಳುಗಳಿಂದ ಬಸ್ ತಂಗುದಾಣದಲ್ಲೇ ವಾಸ ಮಾಡುತ್ತಿರುವ ಮಹಿಳೆಗೆ ತುರ್ತಾಗಿ ಸೂರಿನ ವ್ಯವಸ್ಥೆ ಆಗಬೇಕು. ಸಥಗಿತವಾಗಿರುವ ವಿಧವಾ ವೇತನ ಬರುವಂತೆ ಮಾಡಬೇಕು.
- ಹನುಮಂತಪ್ಪ, ಶಿವಮೂರ್ತಪ್ಪ, ಗ್ರಾಮಸ್ಥರು.
ಇಲ್ಲಿಯವರೆಗೆ ದುಡಿದು ಸ್ವಾಭಿಮಾನದಿಂದ ಬದುಕಿದ್ದೇನೆ. ಆದರೆ, ನನಗೀಗ ವಯಸ್ಸಾಗಿದೆ. ಈಗಲಾದರೂ ಸರ್ಕಾರ ಮನೆ ನೀಡಲಿ. ನಿಂತುಹೋಗಿರುವ ಮಾಸಾಶನ ಕೊಡಿಸಲಿ.
-ಜಯಮ್ಮ, ಕೆಂಗಲಹಳ್ಳಿ.