

ಚನ್ನಪಟ್ಟಣ: ಜೆಡಿಎಸ್ ಹಾಗೂ ಬಿಜೆಪಿ ಅಣ್ಣತಮ್ಮಂದಿರ ಹಾಗೆ. ನಾವು ಜೆಡಿಎಸ್ ಒಟ್ಟಿಗೆ ಸೇರಿ ಡಾ. ಮಂಜುನಾಥ್ ಗೆಲ್ಲಿಸಿ, ಬಂಡೆ ಒಡೆದ್ವಿ. ಅದೇ ರೀತಿ ಈ ಚುನಾವಣೆಯಲ್ಲಿ ನಿಖಿಲ್ ಗೆಲ್ಲಿಸುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ನಗರದ ಎನ್‌ಡಿಎ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಗೇಶ್ವರ್ ಅವರೇ, ಬಿಜೆಪಿಯನ್ನು ನೀವು ಯಾತಕ್ಕಾಗಿ ಬಿಟ್ಟಿರಿ. ನಿಮಗೆ ಟಿಕೆಟ್ ಕೊಡಲ್ಲ ಅಂತಾ ಬಿಜೆಪಿ ಎಲ್ಲಿಯೂ ಹೇಳಿಲ್ಲ. ಯಾವ ಪಕ್ಷ ಅಧಿಕಾರದಲ್ಲಿ ಇದೆಯೋ ಅಲ್ಲಿಗೆ ಹೋಗುವ ಚಾಳಿ ನಿಮಗೆ.. ಯೋಗೇಶ್ವರ್ ಖಾಲಿ ಕೈಯಿಂದ ನಮ್ಮ ಪಕ್ಷಕ್ಕೆ ಬಂದರು. ಆವಾಗ ಖರ್ಚು ಮಾಡಿ ಗೆಲ್ಲಿಸಿ ಮಂತ್ರಿ ಮಾಡಿದೆವು. ಆ ನಂತರ ಸೋತರೂ ವಿಧಾನ ಪರಿಷತ್ ಸದಸ್ಯರಾಗಿ ಮಾಡಿದ್ದೆವು. ಕಮಿಷನ್ ಎಲ್ಲಿ ಬರುತ್ತದೋ ದುಡ್ಡು ಎಲ್ಲಿ ಸಿಗುತ್ತದೋ ಅಲ್ಲಿಗೆ ಹೋಗೋದು ಅವರ ಚಾಳಿ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಹುಮತ ಕೊಟ್ಟ ಜನರಿಗೆ ಸರ್ಕಾರ ಕೊಟ್ಟ ಕೊಡುಗೆ ಏನು..? ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು ಸರ್ಕಾರದಲ್ಲಿ ದುಡ್ಡು ಇಲ್ಲ. ಸರ್ಕಾರದದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ತಿನ್ನಲು ದೊಡ್ಡ ದೊಡ್ಡ ತಿಮಿಂಗಿಲಗಳು ಸೇರಿಕೊಂಡಿವೆ. ರಾಜ್ಯದ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡು ಇಲ್ಲ. ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಕೊಡುವ ಅಕ್ಕಿಯನ್ನು ನಂದು ಎನ್ನುತ್ತಿದ್ದಾರೆ. ಕ್ಷೇತ್ರದ ಜನತೆ ಅತ್ಯಂತ ಭ್ರಷ್ಟ ಸರ್ಕಾರದ ವಿರುದ್ಧ ಮತಕೊಟ್ಟು ನಮ್ಮ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಎಸ್‌ಟಿಎಸ್‌ಗೆ ಶೋಭಾ ಸವಾಲು!
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪರ ಎಸ್.ಟಿ ಸೋಮಶೇಖರ್ ಪ್ರಚಾರ ಹಿನ್ನೆಲೆಯಲ್ಲಿ ಸೋಮಶೇಖರ್‌ಗೆ ಧೈರ್ಯ, ತಾಕತ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಶೋಭಾ ಸವಾಲು ಹಾಕಿದರು. ಎಸ್.ಟಿ ಸೋಮಶೇಖರ್‌ಗೆ ನಮ್ಮ ಪಕ್ಷ ಎಲ್ಲ ಅಧಿಕಾರ ನೀಡಿದೆ. ಅವರು ನನ್ನ ಚುನಾವಣೆ ಸಹ ಮಾಡಿಲ್ಲ. ಆದರೆ, ಯಶವಂತಪುರ ಜನತೆ ಒಂದೂ ಕಾಲು ಲಕ್ಷಗಳ ಮತವನ್ನು ಅಂತರವಾಗಿ ಕೊಟ್ಟರು. ಸೋಮಶೇಖರ್‌ಗೆ ಧೈರ್ಯ, ಶಕ್ತಿ ಇದ್ದರೆ ರಾಜೀನಾಮೆ ಕೊಟ್ಟು, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಬೇಕಿತ್ತು. ಅವಾಗ ಅವರ ಶಕ್ತಿ ಏನು ಎಂದು ನೋಡಬಹುದಿತ್ತು. ಆದರೆ, ಆ ಯಾವ ಶಕ್ತಿಯೂ ಅವರಲ್ಲಿ ಉಳಿದುಕೊಂಡಿಲ್ಲ. ಕಮಿಷನ್‌ಗಾಗಿ, ದುಡ್ಡು ಹೊಡೆಯೋಕೆ ಕಾಂಗ್ರೆಸ್‌ಗೆ ಹೋಗಿದ್ದಾರೆ. ಪಕ್ಷಕ್ಕೆ ದ್ರೋಹ ಎಸಗಿರುವ ಸೋಮಶೇಖರ್ ಹಾಗೂ ಯೋಗೇಶ್ವರ್ ಅವರನ್ನು ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಿಸುವ ಪ್ರಶ್ನೆಯೇ ಇಲ್ಲ ಎಂದರು.