

ಕಲಘಟಗಿ: ಪಟ್ಟಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಶಿಕ್ಷಕರ ದಿನಾಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಹೆಸರು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಪಟ್ಟಣ ಹೊರವಲಯದಲ್ಲಿರುವ ಗುಡ್ ನ್ಯೂಸ್ ಕಾಲೇಜಿನಲ್ಲಿ ಸೆ.6ರಂದು ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನಿಯಮಾವಳಿ ಗಾಳಿಗೆ ತೂರಿ ಸ್ಥಳೀಯ ಶಾಸಕರ ಹೆಸರನ್ನೇ ಕೈಬಿಡಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ತಹಸೀಲ್ದಾರ್ ವೀರೇಶ ಮುಳುಗುಂದಮಠ, ತಾಲೂಕು ಪಂಚಾಯಿತಿ ಇಒ ಪರಶುರಾಮ ಸಾವಂತ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅವರ ಹೆಸರಗಳನ್ನು ಮುದ್ರಿಸಲಾಗಿದೆ. ಸಚಿವರ ಹೆಸರು ಕೈ ಬಿಟ್ಟಿರುವುದಕ್ಕೆ ಲಾಡ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅದು ಅಧಿಕೃತ ಆಮಂತ್ರಣ ಪತ್ರಿಕೆಯೇ ಅಲ್ಲ. ಕಾರ್ಯಕ್ರಮಕ್ಕೆ ಆಹ್ವಾನಿಸಲು ಔಪಚಾರಿಕವಾಗಿ ಬಳಸಿದ ಪತ್ರಿಕೆ. ಸಚಿವರ ಹೆಸರು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಇಒ ಉಮಾದೇವಿ ಬಸಾಪುರ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಕರ ದಿನಾಚರಣೆ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಶಿಕ್ಷಣ ಇಲಾಖೆಯವರು ಅದರ ಜವಾಬ್ದಾರಿ ಹೊತ್ತಿರುತ್ತಾರೆ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ.>ವೀರೇಶ ಮುಳುಗುಂದಮಠ, ತಹಸೀಲ್ದಾರ್