ರಂಜಾನ್ ಸಾಮೂಹಿಕ ಪ್ರಾರ್ಥನೆ ಇಲ್ಲ

23 kollegal-1.C
Published on

ಕೊಳ್ಳೇಗಾಲ: ಕರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆಗಳನ್ನು ರದ್ದುಪಡಿಸಲಾಗಿದೆ ಎಂದು ಡಿವೈಎಸ್ಪಿ ನವೀನ್ ಕುಮಾರ್ ಹೇಳಿದರು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಧಾರ್ಮಿಕ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
144 ಸೆಕ್ಷನ್ ಜಾರಿಯಲ್ಲಿರುವ ಕಾರಣ ಪಟ್ಟಣ ಸೇರಿ ತಾಲೂಕಿನ ಯಾವುದೇ ಗ್ರಾಮದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ಸರ್ಕಾರದ ಸೂಚನೆ ಪ್ರಕಾರ ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಾಲ್ವರಿಗಿಂತ ಹೆಚ್ಚು ಜನ ಸೇರಬಾರದು. ಇದನ್ನು ಮೀರಿದರೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ ಎಂದವರು ಎಚ್ಚರಿಸಿದರು.

ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಶ್ರಿಕಾಂತ್ ಮಾತನಾಡಿ, ಮುಸಲ್ಮಾನರು ತಮ್ಮ ಮನೆಗಳಲ್ಲಿಯೇ ಸರಳವಾಗಿ ರಂಜಾನ್ ಆಚರಿಸಿಕೊಳ್ಳಬೇಕು. ಯಾರೂ ಬೀದಿಗಿಳಿಯಬಾರದು ಎಂದು ಸೂಚಿಸಿದರು.

ಸೌಹಾರ್ದತೆ ಪಾಲಿಸುತ್ತೇವೆ: ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಎಲ್ಲೆಡೆ ಕೋಮು ಸೌಹಾರ್ದತೆ ಪಾಲನೆಗೆ ಸಹಕರಿಸುತ್ತೇವೆ. ಕಾನೂನು ಪಾಲನೆಗೆ ಹೆಚ್ಚು ಒತ್ತು ನೀಡುತ್ತೇವೆ. ಪೊಲೀಸರು ನೀಡಿದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸಮುದಾಯದವರಿಗೆ ಸಲಹೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಸಂಘಟನೆ ಕಾರ್ಯದರ್ಶಿ ಕೆ.ಎಂ.ಅನ್ವರ್ ಬಾಷಾ, ಉಪಾಧ್ಯಕ್ಷ ಎ.ಪಿ.ಅಕ್ರಂಪಾಷ, ಖಜಾಂಚಿ ಇಬ್ರಾನ್‌ಖಾನ್ ಮಾತನಾಡಿದರು.
ಪಟ್ಟಣ ಠಾಣೆ ಪಿಎಸ್‌ಐ ರಾಜೇಂದ್ರ, ಗ್ರಾಮಾಂತರ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಶೋಕ್, ಮುಖಂಡರಾದ ಹೊಂಡರಬಾಳು ಗ್ರಾಮದ ಸಯ್ಯದ್ ನೂರ್, ಮಧುವನಹಳ್ಳಿ ಜಬೀವುಲ್ಲಾ ಬೇಗ್, ದೊಡ್ಡಿಂದುವಾಡಿಯ ನಾಸೀರ್ ಷರೀಫ್ ಇತರರು ಪಾಲ್ಗೊಂಡಿದ್ದರು.

ಕೊಳ್ಳೇಗಾಲ ಸೇರಿ ತಾಲೂಕಿನ ಎಲ್ಲ ಗ್ರಾಮದಲ್ಲಿ ಮನೆಗಳಲ್ಲೇ ರಂಜಾನ್ ಆಚರಿಸಲು ನಿರ್ಧರಿಸಿದ್ದೇವೆ. ಕಾನೂನು ಗೌರವಿಸುತ್ತೇವೆ. ಕರೊನಾ ಸೊಂಕು ದೇಶದಿಂದ ನಿವಾರಣೆಯಾಗಲಿ ಎಂಬುದು ಈ ಬಾರಿ ನಮ್ಮೆಲ್ಲರ ಪ್ರಾರ್ಥನೆಯಾಗಿದೆ.
ಸಮೀವುಲ್ಲಾ ಅಂಜುಮನ್ ಎ ಇಸ್ಲಾಮಿಯಾ ಅಧ್ಯಕ್ಷ


ಕರೊನಾ ಸೋಂಕು ತೀವ್ರವಾಗಿ ಹಬ್ಬುತ್ತಿದೆ. ರಂಜಾನ್ ಹಬ್ಬದ ಸಂಭ್ರಮ ಆಚರಣೆಗಾಗಿ ಯಾರಾದರೂ ಸಾಮೂಹಿಕ ಪ್ರಾರ್ಥನೆಗೆ ಮುಂದಾದರೆ, ಮಸೀದಿಗಳಲ್ಲಿ ಸಭೆ, ಮೆರವಣಿಗೆ ಮಾಡಲು ಯತ್ನಿಸಿದರೆ ಕಠಿಣವಾದ ಕಾನೂನು ಕ್ರಮ ಜರುಗಿಸಲಾಗುತ್ತದೆ.
ನವೀನ್ ಕುಮಾರ್ ಡಿವೈಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net