ಶಾಸಕ ಪಾಟೀಲ ಹೇಳಿಕೆಯಲ್ಲಿ ದುರುದ್ದೇಶವಿಲ್ಲ, ಶಿವರಾಜ ಘೊರ್ಪಡೆ ಸ್ಪಷ್ಟನೆ

29 GJD 2- cong
Published on


ಗಜೇಂದ್ರಗಡ: ದೇಶದಲ್ಲಿ ಬಡತನ, ನಿರುದ್ಯೋಗ ಸೇರಿ ಅನೇಕ ಸಮಸ್ಯೆಗಳನ್ನು ಬಗೆಹರಿಸದೆ ಕೇವಲ ಕಾಪೋರೇಟ್ ಕಂಪನಿಗಳ ಹಿತ ಕಾಪಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಆಕ್ರೋಶದಿಂದ ಶಾಸಕರು ಮಾತನಾಡಿದ್ದಾರೆ ಹೊರತು, ಯಾವುದೇ ದುರುದ್ದೇಶದಿಂದಲ್ಲ ಎಂದು ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ಘೊರ್ಪಡೆ ಸ್ಪಷ್ಟನೆ ನೀಡಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿನಾಕಾರಣ ವಿಷಯವನ್ನು ಬಿಜೆಪಿಯವರು ತಿರುಚಿ ರಾಜ್ಯದ ಹಾಗೂ ಕ್ಷೇತ್ರದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಸಲ ಆಡಳಿತ ನಡೆಸಿದ ಬಿಜೆಪಿ, ಬಡ ಜನರ ಉದ್ಧಾರಕ್ಕೆ ಯಾವುದೇ ಯೋಜನೆ ಕೊಡಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಆಡಳಿತ ಅರಿತಿರುವ ರಾಜ್ಯದ ಜನರು, 136 ಸೀಟು ನೀಡಿ ಸಿದ್ದರಾಮಯ್ಯ ಅವರಿಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಶಾಸಕ ಜಿ.ಎಸ್. ಪಾಟೀಲರು ಆಕ್ರೋಶದಿಂದ ಆ ಮಾತು ಹೇಳಿದ್ದಾರೆ ಎಂದರು.


ಕೇಂದ್ರ ಸರ್ಕಾರ ಐಟಿ, ಇಡಿ ಇಲಾಖೆಗಳನ್ನು ಬಳಸಿಕೊಂಡು ವಿಪಕ್ಷಗಳ ಮೇಲೆ ವಿನಾಕಾರಣ ದಾಳಿ ಮಾಡಿಸುತ್ತಿವೆ. ಆದರೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಮೇಲೆ ಇವೆಲ್ಲ ಅಸ್ತ್ರಗಳು ಪ್ರಯೋಗವಾಗದ ಹಿನ್ನೆಲೆಯಲ್ಲಿ ರಾಜ್ಯಪಾಲರ ಮುಖಾಂತರ ಅವರನ್ನು ಮುಗಿಸುವ ಹುನ್ನಾರ ನಡೆದಿದೆ ಇದು ಖಂಡನೀಯ ಎಂದರು.


ಎಚ್.ಎಸ್. ಸೋಂಪುರ, ಸಿದ್ದಣ್ಣ ಬಂಡಿ ಮಾತನಾಡಿದರು. ಪುರಸಭೆ ವಿಪಕ್ಷ ನಾಯಕ ಮುರ್ತಜಾ ಡಾಲಾಯತ, ಸದಸ್ಯರಾದ ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್ಲ, ಶರಣು ಪೂಜಾರ, ಬಿ.ಎಸ್. ಶೀಲವಂತರ, ಉಮೇಶ ರಾಠೋಡ, ಸಿದ್ದು ಗೊಂಗಡಶೆಟ್ಟಿಮಠ, ಅಂದಪ್ಪ ಬಿಚ್ಚೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net