ಹೈನುಗಾರಿಕೆ ಅವಲಂಬಿಸಿದರೆ ನಷ್ಟವಾಗದು

ಪಾಂಡವಪುರ ಪಟ್ಟಣದ ಮನ್‌ಮುಲ್ ಕಚೇರಿಯಲ್ಲಿ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ರಾಸುಗಳ ಮಾಲೀಕರಿಗೆ ವಿಮೆ ಚೆಕ್ ವಿತರಿಸಿದರು. ಆರ್.ಪ್ರಸಾದ್, ಎಚ್.ಎನ್.ಉಷಾ, ಮಂಜುನಾಥ್, ಜಗದೀಶ್ ಮತ್ತಿತರರಿದ್ದರು.
ಪಾಂಡವಪುರ ಪಟ್ಟಣದ ಮನ್‌ಮುಲ್ ಕಚೇರಿಯಲ್ಲಿ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ರಾಸುಗಳ ಮಾಲೀಕರಿಗೆ ವಿಮೆ ಚೆಕ್ ವಿತರಿಸಿದರು. ಆರ್.ಪ್ರಸಾದ್, ಎಚ್.ಎನ್.ಉಷಾ, ಮಂಜುನಾಥ್, ಜಗದೀಶ್ ಮತ್ತಿತರರಿದ್ದರು.
Published on

ಪಾಂಡವಪುರ: ತರಕಾರಿ ಬೆಳೆಯುವ ರೈತರು ಮಾರುಕಟ್ಟೆ ದರ ಏರಿಳಿತದಿಂದ ನಷ್ಟ ಅನುಭವಿಸುತ್ತಾರೆ. ಆದರೆ ಹೈನುಗಾರಿಕೆ ಮೇಲೆ ಅವಲಂಭಿತರಾಗಿರುವ ರೈತರು ಎಂದೂ ನಷ್ಟಕ್ಕೆ ತುತ್ತಾಗಲಾರರು ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ತಿಳಿಸಿದರು.

ಪಟ್ಟಣದ ಮನ್‌ಮುಲ್ ಉಪಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಸುಗಳ ಮಾಲೀಕರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ರಾಸುಗಳ ವಿಮೆ ಮತ್ತು ಗುಂಪು ವಿಮೆ ಯೋಜನೆಯಡಿ 46 ರೈತರಿಗೆ 25 ಲಕ್ಷ ರೂ. ಮೊತ್ತದ ಚೆಕ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು.

ತರಕಾರಿ ಬೆಲೆ ಒಮ್ಮೊಮ್ಮೆ ದಿಢೀರ್ ಕುಸಿತ ಕಂಡು ಮತ್ತೊಮ್ಮೆ ಏರಿಕೆ ಆಗುತ್ತದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆ ಕಾಣುವುದಿಲ್ಲ. ಆದರೆ ಹೈನುಗಾರಿಕೆಯಿಂದ ರೈತರು ಎಲ್ಲ ಕಾಲದಲ್ಲೂ ಸಮಾನವಾದ ಆದಾಯ ಕಾಣಬಹುದು. ಜತೆಗೆ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣದ ವೆಚ್ಚವನ್ನು ನಿಭಾಯಿಸಿಕೊಳ್ಳಬಹುದಾಗಿದೆ. ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಪೂರೈಸಿದರೆ ಒಕ್ಕೂಟ ಬೆಳವಣಿಗೆ ಕಾಣುತ್ತದೆ. ಒಕ್ಕೂಟ ಬೆಳೆದರೆ ಉತ್ಪಾದಕರಿಗೆ ಹೆಚ್ಚಿನ ಅನುಕೂಲತೆಗಳು ಸಿಗಲಿದೆ. ಹೀಗಾಗಿ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ಸಲಹೆ ನೀಡಿದರು.

ಹಿಂದೆ ನಾಟಿ ಹಸುಗಳು, ಎಮ್ಮೆಗಳನ್ನು ಸಾಕುತ್ತಿದ್ದೆವು. ಈಗ ಜೆರ್ಸಿ, ಎಚ್‌ಎಫ್ ತಳಿಗಳನ್ನು ಸಾಕಲಾಗುತ್ತಿದ್ದು, ಈ ತಳಿಗಳು ವಿದೇಶದ ತಳಿಗಳಾಗಿದ್ದು, ನಮ್ಮ ವಾತವರಣಕ್ಕೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟಕರ. ರಾಸುಗಳಿಗೆ ಮಾತು ಬರುವುದಿಲ್ಲ. ಕಾಯಿಲೆ ಬಂದರೆ ಹೇಳಿಕೊಳ್ಳಲ್ಲ. ಹೀಗಾಗಿ ರಾಸುಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ಮೇವು ಪೂರೈಕೆ, ಔಷಧೋಪಚಾರ ಹಾಗೂ ಮಿನರಲ್ಸ್, ಅಜ್ವಲ್, ಒಕ್ಕೂಟ ಮಾರಾಟ ಮಾಡುವ ಪಶು ಆಹಾರಗಳನ್ನು ನೀಡುವ ಮೂಲಕ ಗುಣಮಟ್ಟದ ಹಾಲು ಪಡೆಯಬಹುದು. ರಾಸುಗಳನ್ನು ನಿರ್ವಹಣೆ ಮಾಡದಿದ್ದರೆ ಕಳಪೆ ಹಾಲು ಕೊಡುತ್ತವೆ. ಇದರಿಂದ ಸರ್ಕಾರದ ಪ್ರೋತ್ಸಾಹ ಧನ ಸೇರಿದಂತೆ ಇತರೆ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಅಧಿಕಾರ ಬರುತ್ತೇ, ಹೋಗುತ್ತದೆ ಇದರ ನಡುವೆ ನಾವು ಹೇಗೆ ಕೆಲಸ ಮಾಡ್ತೀವಿ ಎಂಬುದು ಲೆಕ್ಕಕ್ಕೆ ಬರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಪಡೆಯಬೇಕು ಎಂಬುದು ನಮ್ಮ ಕನಸಾಗಿದೆ. ಇದಕ್ಕೆ ಉತ್ಪಾದಕರು ಸಹಕಾರ ನೀಡಬೇಕು. ಒಕ್ಕೂಟದ ಸವಲತ್ತುಗಳನ್ನು ಬಳಸಿಕೊಳ್ಳುವ ಜತೆಗೆ ರಾಸುಗಳಿಗೆ ವಿಮೆ ಮತ್ತು ಷೇರುದಾರರು ಗುಂಪು ವಿಮೆ ವ್ಯಾಪ್ತಿಗೆ ಒಳಪಟ್ಟು ನಷ್ಟದಿಂದ ಪಾರಾಗಬೇಕು ಎಂದು ಮನವಿ ಮಾಡಿದರು. ಈ ವೇಳೆ ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮರ್ಗವಿಸ್ತರಣಾಧಿಕಾರಿಗಳಾದ ಎಚ್.ಎನ್.ಉಷಾ, ಜಗದೀಶ್, ಮಂಜುನಾಥ್, ಪ್ರಜ್ವಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net