

ಕಡೂರು: ಸಾಹಿತ್ಯ ಕ್ಷೇತ್ರಕ್ಕೆ ಕಡೂರಿನ ಕೊಡುಗೆ ಅಪಾರ. ತಾಲೂಕಿನಲ್ಲಿ ಬರವಿದೆ. ಆದರೆ ಸಾಹಿತ್ಯಕವಾಗಿ ಎಂದಿಗೂ ಬರದ ಛಾಯೆ ಕಾಡಿಲ್ಲ. ತಾಲೂಕಿನಲ್ಲಿರುವ ಅಂಥ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಸಾಪ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ 6ನೇ ಕನ್ನಡ ಸಾಹಿತ್ಯ ತಾಲೂಕು ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವಂಥ ಪ್ರತಿಭೆಗಳಿರುವುದು ಹೆಮ್ಮೆಯ ಸಂಗತಿ. 90ರ ದಶಕದಿಂದ ಈಚೆಗೆ ಜಾಗತೀಕರಣದ ನಂತರ ಕನ್ನಡ ಬಡವಾಗಿದೆ. ಸಾಂಸ್ಕೃತಿಕವಾಗಿ ಹಿಂದುಳಿದಿದೆ ಎಂಬುದು ವಾಸ್ತವ. ನಮ್ಮತನ ನೆಲಕಚ್ಚುತ್ತಿದೆ. ಪ್ರಾದೇಶಿಕತೆ ಮರೆಯಾಗುತ್ತಿದೆ. ಸರ್ಕಾರಗಳೂ ಕನ್ನಡವನ್ನು ತಾತ್ಸಾರ ಮಾಡುತ್ತಿವೆಯೆಂಬ ಭಾವನೆ ಕಾಡುತ್ತಿದೆ. ಸಾಹಿತ್ಯ ಸಮ್ಮೇಳನಗಳಿಗೆ ರಾಜಕಾರಣಿಗಳನ್ನು ಕರೆಯುವ ಕೆಟ್ಟ ಪರಿಪಾಠ ಕೊನೆಯಾಗಬೇಕು. ಸಾಹಿತ್ಯ ಸಮ್ಮೇಳನ ಸಂಪೂರ್ಣ ಸಾಹಿತ್ಯದ ಜಾತ್ರೆಯಾಗಬೇಕು. ರಾಜಕೀಯದ ಮೇಲಾಟಕ್ಕೆ ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಬಾರದು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯ ಸಮ್ಮೇಳಗಳನ್ನು ನಡೆಸುವುದರ ಹಿಂದಿನ ಔಚಿತ್ಯ ಪ್ರಶ್ನಿಸುವವರು ಇದ್ದಾರೆ. ಆದರೆ ನಮ್ಮ ನೆಲದ ಹಿರಿಮೆ ಮುಂದಿನ ಪೀಳಿಗೆಗೆ ತಿಳಿಯಬೇಕು. ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಿತ್ಯದ ಕಂಪು ಸದಾ ಪಸರಿಸುತ್ತಿರಬೇಕೆಂಬ ಆಶಯದಿಂದ ಇಂಥ ಸಾಹಿತ್ಯ ಸಮ್ಮೇಳನಗಳನ್ನು ಕಸಾಪ ಸದಾ ಆಯೋಜಿಸುತ್ತಿದೆ. ಎಲ್ಲರ ಸಹಭಾಗಿತ್ವದೊಂದಿಗೆ ಕನ್ನಡತನ ಗಟ್ಟಿಗೊಳಿಸಲು ಕಸಾಪ ನಿರಂತರವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಹೊಸೂರು ಪುಟ್ಟರಾಜು ಮಾತನಾಡಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂಥ ಹಿರಿಯ ಗೌರವ ದೊರೆತಿದ್ದು ಶಿಕ್ಷಕ ಸಮೂಹಕ್ಕೆ ಸಂದ ಗೌರವ ಎಂದು ಹೇಳಿದರು.
ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕನ್ನಡ ಪರ ಹೋರಾಟಗಾರ ಕೆ.ವಿ.ವಾಸು ಮತ್ತು ನಿವೃತ್ತ ಶಿಕ್ಷಕ ಸಿ.ಕೆ.ಬಸವರಾಜಪ್ಪ ಅವರಿಗೆ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಪಿ.ಎಚ್.ವಿಜಯಲಕ್ಷ್ಮೀ, ಮರವಂಜಿ ವಿಜಯಕುಮಾರ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಬಿ.ವಿ.ಶ್ರುತಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಪುರಸಭೆ ಸದಸ್ಯ ಕೆ.ಎಂ.ಮೋಹನ್‌ಕುಮಾರ್, ಬಿ.ಟಿ.ಗಂಗಾಧರ ನಾಯ್ಕ, ಕೋಡಿಹಳ್ಳಿ ಮಹೇಶ್ವರಪ್ಪ, ವಿ.ಜಿ.ಒಡೆಯರ್ ಇತರರಿದ್ದರು.