ಅಂತ್ಯಸಂಸ್ಕಾರಕ್ಕೆ ರುದ್ರಭೂಮಿಯೇ ಇಲ್ಲ ! - ಶವ ಮನೆ ಮುಂದಿಟ್ಟು ಕುಟುಂಬಸ್ಥರ ಗೋಳಾಟ

ಫೂಲಬಾವಿ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದ ಕಾರಣ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ಉಂಟಾಯಿತು.
ಫೂಲಬಾವಿ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದ ಕಾರಣ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ಉಂಟಾಯಿತು.
Published on

ಲಿಂಗಸುಗೂರು: ತಾಲೂಕಿನ ಫೂಲಬಾವಿ ಗ್ರಾಮದಲ್ಲಿ ರುದ್ರಭೂಮಿ ಇಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲು ಪರದಾಡಿದ ಕುಟುಂಬಸ್ಥರು ಶವವನ್ನು ಮನೆ ಮುಂದೆ ಇಟ್ಟು ಸೋಮವಾರ ಪರದಾಡುವಂತಾಯಿತು.

ಗ್ರಾಮದ ಹನುಮಂತ (54) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟರು. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಖಾಸಗಿ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತಿತ್ತು. ಆದರೆ, ಇತ್ತೀಚೆಗೆ ಖಾಸಗಿ ಭೂ ಮಾಲೀಕ ಮೃತರ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಮೃತದೇಹ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲದಾಗಿದೆ.

2021-22 ನೇ ಸಾಲಿನಲ್ಲಿ ಕಂದಾಯ ಇಲಾಖೆ ೂಲಭಾವಿ ಗ್ರಾಮದ ಸರ್ವೆ ನಂ. 92ರ 5.16 ಎಕರೆ ಸರ್ಕಾರಿ ಜಮೀನಿನಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಎರಡು ಎಕರೆ ಜಮೀನು ಮಂಜೂರು ಮಾಡಿದೆ. ಆದರೆ, ರುದ್ರಭೂಮಿಗೆ ತೆರಳಲು ರಸ್ತೆ ಹದ್ದುಬಸ್ತು ಕೈಗೊಳ್ಳದ ಕಾರಣ ಶವಸಂಸ್ಕಾರಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಘಟನಾ ಸ್ಥಳಕ್ಕೆ ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿದಾಗ ಗ್ರಾಮಸ್ಥರು ಮತ್ತು ಅಧಿಕಾರಿಗಳ ಮಧ್ಯೆ ವಾಗ್ವಾದ ಉಂಟಾಯಿತು. ಅಂತಿಮವಾಗಿ ಖಾಸಗಿ ವ್ಯಕ್ತಿಯ ಜಮೀನಿನಲ್ಲೇ ಶವ ಸಂಸ್ಕಾರ ಮಾಡಲಾಯಿತು. ಸರ್ಕಾರದ ಎರಡು ಎಕರೆ ಜಮೀನು ರುದ್ರಭೂಮಿಯನ್ನಾಗಿ ಪರಿವರ್ತಿಸಲು ಒಂದು ತಿಂಗಳು ಗಡುವು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net