ಬಿಜೆಪಿಯವರು ಇಂಥದ್ದೇ ವಿಷಯ ಹುಡುಕುತ್ತಿರುತ್ತಾರೆ

abbayya prasad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಈದ್ಗಾ, ರಾಮಜನ್ಮ ಭೂಮಿ...ರಾಜಕಾರಣ ಮಾಡಲು ಬಿಜೆಪಿಯವರು ಇಂಥದ್ದೇ ವಿಷಯ ಹುಡುಕುತ್ತಿರುತ್ತಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಸೂಚನೆ ಮೇರೆಗೆ ಶ್ರೀಕಾಂತ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೋಲಿಸರು ತಮ್ಮ ರೂಟೀನ್ ವರ್ಕ್ ಮಾಡಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು. ಸಣ್ಣ ವಿಷಯಕ್ಕೆ ಬಣ್ಣ ಹಚ್ಚಿ ಬೇರೆ ತರಹದ ಮೆಸೇಜ್ ಪಾಸ್ ಮಾಡಿ ಕೋಮು ಸೌಹಾರ್ದತೆ ಹಾಳು ಮಾಡುವುದನ್ನು ಬಿಜೆಪಿ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದೆ ಎಂದರು.

ವಿಪಕ್ಷ ನಾಯಕರಾಗಿ ಆರ್. ಅಶೋಕ ಅಭಿವೃದ್ಧಿ ವಿಚಾರವಾಗಿ ಪ್ರತಿಭಟನೆ ಮಾಡಲಿ. ಅದು ಬಿಟ್ಟು ಇಂಥ ವಿಚಾರ ಇಟ್ಟುಕೊಂಡು ಚುನಾವಣೆ ಗಿಮಿಕ್ ಮಾಡುವುದು ಸರಿಯಲ್ಲ. ಈ ಒಂದು ಪ್ರಕರಣವನ್ನು ದೊಡ್ಡದು ಮಾಡುವುದು ಎಷ್ಟರಮಟ್ಟಿಗೆ ಸರಿ ? ಬಿಜೆಪಿಯವರಿಗೆ ಬೇರೆ ವಿಷಯ ಇಲ್ಲ. ಜನ ಸರ್ಕಾರದ ಬಗ್ಗೆ ಮೆಚ್ಚುಗೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. 5 ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಬಿಜೆಪಿ ಹತಾಶಗೊಂಡಿದೆ ಎಂದು ಟೀಕಿಸಿದರು.

ಪೊಲೀಸರೇನೂ ಶ್ರೀ ರಾಮ ಮಂದಿರ ಉದ್ಘಾಟನೆ ಹತ್ತಿರವಿದೆಯೆಂದು ನೋಡಿಕೊಂಡು ಪ್ರಕರಣ ರೀ ಓಪನ್ ಮಾಡಿದ್ದಾರಾ? ಬಿಜೆಪಿಯವರು ಪ್ರಕರಣವನ್ನು ಹೇಗೆ ಬೇಕಾದರೂ ತಿರುಚುತ್ತಾರೆ. ಹುಬ್ಬಳ್ಳಿ ಈದ್ಗಾ ವಿಷಯ ಇಟ್ಟುಕೊಂಡು ಬಿಜೆಪಿ ದೇಶದಲ್ಲಿ ನಲೆಯೂರಿತ್ತು. ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಅಧಿಕಾರದಲ್ಲಿ ಇದ್ದಾಗ ಅಪಾರ ಭ್ರಷ್ಟಾಚಾರ ಮಾಡಿದ್ದಕ್ಕೆ ಜನರು ಇವರನ್ನು ಮನೆಗೆ ಕಳುಹಿಸಿದರು. ಈಗ ಗೊಂದಲ ಸೃಷ್ಟಿ ಮಾಡಿ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಶೇ. 90 ಅಮಾಯಕರನ್ನು ಜೈಲಿಗೆ ಕಳುಹಿಸಿದ್ದು ರಾಜಕಾರಣ ಅಲ್ಲವೇ? ಅವರೆಲ್ಲ ಈಗ ನ್ಯಾಯಾಲಯದಿಂದಲೇ ಜಾಮೀನು ಪಡೆದು ಹೊರಗೆ ಬರುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net