

ಬಾಗೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ತಾಲೂಕಿನ 1142 ಶ್ರೀ ಶಕ್ತಿ ಸಂಘಗಳಿಗೆ 47 ಕೋಟಿ 27 ಲಕ್ಷದ 43 ಸಾವಿರ ಸಾಲ ನೀಡಲಾಗಿದೆ. ಸಕಾಲದಲ್ಲಿ ಮರುಪಾವತಿಸಿದರೆ ಬಡ್ಡಿ ಇರುವುದಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕಾರೆಹಳ್ಳಿ ಎರಡನೇ ಬ್ಲಾಕ್‌ನಲ್ಲಿ ಸೋಮವಾರ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಶಕ್ತಿ ಸಂಘಗಳ ಸಾಲಕ್ಕೆ ರಾಜ್ಯ ಸರ್ಕಾರ ಶೇ.7, ಕೇಂದ್ರ ಸರ್ಕಾರ ಶೇ.5 ಹಣವನ್ನು ಶ್ರೀ ಶಕ್ತಿ ಸಂಘದ ಬ್ಯಾಂಕ್ ಖಾತೆಗೆ ನೇರವಾಗಿ ಬಡ್ಡಿ ಜಮಾ ಮಾಡುತ್ತದೆ ಎಂದು ತಿಳಿಸಿದರು. ಇಂತಹ ಸಾಲ ಸೌಲಭ್ಯ ಉಪಯೋಗಿಸಿಕೊಳ್ಳಿ, ಕಾರೆಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಶ್ರೀ ಶಕ್ತಿ ಸಂಘಗಳಿಗೆ 57 ಲಕ್ಷ ರೂ. ಸಾಲ ನೀಡಿದೆ. ಮೈಕ್ರೋ ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಹೈನುಗಾರಿಕೆಯಲ್ಲಿ ರಾಜ್ಯದಲ್ಲಿ ಜಿಲ್ಲೆ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕು 2ನೇ ಸ್ಥಾನದಲ್ಲಿದ್ದು, ತಾಲೂಕಿನಲ್ಲಿ ಒಟ್ಟು 338 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಎರಡುವರೆ ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಇದರಿಂದ ರೈತರಿಗೆ ತಿಂಗಳಿಗೆ 27 ಕೋಟಿ.50 ಲಕ್ಷ ಹಣ ಸಿಗುತ್ತಿದೆ ಎಂದರು. ಕಾರೆಹಳ್ಳಿ ರಸ್ತೆ ಸಮಸ್ಯೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ಪಶು ಆಸ್ಪತ್ರೆ ಕಟ್ಟಡ, ದೊಡ್ಡಮ್ಮ ದೇವಿ ದೇಗುಲ ಜೀರ್ಣೋದ್ಧಾರ ಮಾಡಿಸುವ ಭರವಸೆ ನೀಡಿದರು.
ಸಮಾರಂಭದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಸಂತ ರಾಮೇಗೌಡ, ಕಾರ್ಯದರ್ಶಿ ಸುಪ್ರಿತಾ ನಂದೀಶ್, ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪಲತಾ ನಟೇಶ್, ಮುಖಂಡರಾದ ರಾಮಚಂದ್ರು, ಕೆ.ಟಿ.ನಟೇಶ್, ಕೆ.ಎ.ಸತೀಶ್, ಜಯರಾಮ್, ಶಿವಣ್ಣ, ಶ್ರವಣಬೆಳಗೊಳ ಲಕ್ಷ್ಮಣ್, ಬ್ಯಾಂಕ್ ಚಂದ್ರೇಗೌಡ, ನಾಗೇಂದ್ರ, ಸಹಕಾರ ಸಂಘದ ಮಾಜಿ ಅಧ್ಯಕ್ಷ ನಟೇಶ್, ದೇವರಾಜು, ಶಮಿ, ಗೋಪಾಲ್, ಹರೀಶ್, ಮಹಿಳಾ ಸದಸ್ಯರಾದ ಸರೋಜಮ್ಮ ಕೃಷ್ಣಮೂರ್ತಿ, ತನುಜಾ ಉಮೇಶ್, ಗಿರಿಜಮ್ಮ ಸೋಮಶೇಖರ್, ಭಾರತಿ ವೆಂಕಟೇಶ್, ಪಾಲಾಕ್ಷಮ್ಮ ಮಲ್ಲೇಶ್, ಕಲಾವತಿ ದೇವರಾಜ್, ರತ್ತಮ್ಮ ಮಂಜೇಗೌಡ, ಲಕ್ಷ್ಮಮ್ಮ, ನಹಿದಾ ಬಾನ್, ಸುನಂದ, ಇತರರು ಹಾಜರಿದ್ದರು.