ಸರ್ಕಾರಿ ಪ್ರೌಢಶಾಲೆಯಲ್ಲಿ ಮೂಲಸೌಕರ್ಯಗಳೇ ಇಲ್ಲ

27spt1
ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮ ಪಂಚಾಯಿತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯನ್ನು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸ್ನೇಹಶ್ರೀ ಉದ್ಘಾಟಿಸಿದರು. ಗೀತಾ, ಮಹೇಶ್, ಮಂಜುಳಾ, ಸುಮನಾ, ನಿಶಾಂತ್ ಇದ್ದರು.
Published on

ಸೋಮವಾರಪೇಟೆ: ಪಟ್ಟಣದ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಗೋಡೆಗಳಿಗೆ ಬಣ್ಣ ಬಳಿದಿಲ್ಲ. ಕೈತೊಳೆಯಲು ಬೇಸಿನ್ ಇಲ್ಲ, ರಸ್ತೆಯಿಲ್ಲ, ವಿದ್ಯುತ್ ದೀಪಗಳು ಉರಿಯುದಿಲ್ಲ…


ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಚೌಡ್ಲು ಗ್ರಾಮ ಪಂಚಾಯಿತಿ, ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ನಾವು ಪ್ರತಿಷ್ಠಾನ ಕೊಡಗು ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಯ ಸರಮಾಲೆಯನ್ನು ಬಿಚ್ಚಿಟ್ಟರು.


ಶಾಲೆಯ ಗೋಡೆಗಳಲ್ಲಿ ಬಣ್ಣವೇ ಇಲ್ಲ. ಅಸಹ್ಯವಾಗಿರುವ ಗೋಡೆಗಳನ್ನು ನೋಡಿದರೆ ಬೇಸರವಾಗುತ್ತದೆ. ಉತ್ತಮ ಶಿಕ್ಷಣ ಸಿಗುತ್ತಿದೆ. ಆದರೆ ಪ್ರಾಥಮಿಕ ಸೌಲಭ್ಯಗಳು ಇಲ್ಲ ಎಂದು 9ನೇ ತರಗತಿಯ ಗ್ರೀಷ್ಮಾ ಹೇಳಿಕೊಂಡಳು.


ವಿದ್ಯುತ್ ಸಂಪರ್ಕ ಸರಿಯಿಲ್ಲ. ಸ್ಮಾರ್ಟ್ ಕ್ಲಾಸ್ ಕೇಳಲು ಸಾಧ್ಯವಾಗುತ್ತಿಲ್ಲ. ಸಂಜೆ ನಡೆಯುವ 10ನೇ ತರಗತಿ ವಿದ್ಯಾರ್ಥಿಗಳ ಸ್ಪೇಷಲ್ ಕ್ಲಾಸ್‌ಗೆ ಬೆಳಕು ಇಲ್ಲದಂತಾಗಿದೆ ಎಂದು ಹೇಳಿದರು.


ಕಾಲೇಜು ರಸ್ತೆ ಹಾಳಾಗಿದೆ. ಇಳಿಜಾರು ಇರುವುದರಿಂದ ಮಳೆ ಬಂದರೆ ವಿದ್ಯಾರ್ಥಿಗಳು ಕೆಸರಿನಲ್ಲಿ ಬಿದ್ದೆದ್ದು ಶಾಲೆಗೆ ಹೋಗಬೇಕು. ರಸ್ತೆ ಮಾಡಿಕೊಡಿ ಎಂದು 8ನೇ ತರಗತಿಯ ನಾಪೀರ್ ಬೇಡಿಕೆ ಇಟ್ಟರು. ಶಾಲೆಗೆ ಕಾವಲುಗಾರರ ನೇಮಕವಾಗಬೇಕು. ಸರ್ಕಾರ ಉಚಿತ ಬೈಸಿಕಲ್ ಯೋಜನೆ ಜಾರಿಗೆ ತರಬೇಕು ಎಂದು ಹೇಳಿದರು.


ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಕಾಂಪೌಂಡ್ ಮೇಲೆ ಮುಳ್ಳಿನ ತಂತಿ ಬೇಲಿ ನಿರ್ಮಿಸಿಕೊಡಬೇಕು. ಚನ್ನಬಸಪ್ಪ ಸಭಾಂಗಣದ ಮುಂಭಾಗ ಕಾಂಕ್ರೀಟ್ ಹಾಕಿಕೊಡಬೇಕು ಎಂದು ವಿದ್ಯಾರ್ಥಿಗಳಾದ ಸುಶ್ಮಿತಾ, ಲಿಪ್ತಾ ಬೇಡಿಕೆಯಿಟ್ಟರು.


ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಂಡರು ಬಾಗಿಲಿನ ಬೋಲ್ಟ್‌ನಟ್‌ಗಳನ್ನು ಬಿಚ್ಚುತ್ತಾರೆ. ಸಿ.ಸಿ. ಕ್ಯಾಮರಾ ಅಳವಡಿಸಿಕೊಡಬೇಕು. ಆಟದ ಮೈದಾನವನ್ನು ದುರಸ್ತಿ ಮಾಡಿಸಿಕೊಡಬೇಕು ಎಂದು ವಿದ್ಯಾರ್ಥಿಗಳಾದ ನಿತಿನ್, ನಿಶಾಂತ್ ಬೇಡಿಕೆ ಇಟ್ಟರು.


ಮಕ್ಕಳ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸರ್ಕಾರಿ ಪ್ರೌಢಶಾಲೆಯ ರಸ್ತೆ ಡಾಂಬರೀಕರಣವನ್ನು ನರೇಗಾ ಯೋಜನೆಯಲ್ಲಿ ನಿರ್ವಹಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಡಿಒ ಪೂರ್ಣಕುಮಾರ್ ಭರವಸೆ ನೀಡಿದರು. ವಿದ್ಯಾರ್ಥಿಗಳು ಕೈತೊಳೆಯಲು ಬೇಸಿನ್ ವ್ಯವಸ್ಥೆ ಮಾಡುತ್ತೇವೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ಸೆಸ್ಕ್ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಗೋಡೆಗಳಿಗೆ ಸುಣ್ಣ ಬಳಿಯಲು ವ್ಯವಸ್ಥೆ ಮಾಡುತ್ತೇವೆ. ಚೌಡ್ಲು ಶಾಲೆ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.


ಸರ್ಕಾರಿ ಶಾಲೆಗಳಿಗೆ ಈ ಹಿಂದೆ ಸ್ಯಾನಿಟರಿ ಪ್ಯಾಡ್ ನೀಡಲಾಗುತ್ತಿತ್ತು. ಈಗ ನೀಡುತ್ತಿಲ್ಲ. ನಮಗೆ ಪ್ಯಾಡ್ ಅವಶ್ಯಕತೆ ಇದೆ ಎಂದು ವಿದ್ಯಾರ್ಥಿನಿ ಬೇಡಿಕೆ ಇಟ್ಟರು. ಈ ಬಗ್ಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆಯುವುದಾಗಿ ಪಿಡಿಒ ಭರವಸೆ ನೀಡಿದರು.


ಮಕ್ಕಳ ಸಹಾಯವಾಣಿ ಕಾರ್ಯಕ್ರಮ ಸಂಯೋಜಕ ನವೀನ್ ಕುಮಾರ್ ದತ್ತು ಮಕ್ಕಳ ನಿಯಮಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಬ್ದುಲ್ ನಿಶಾದ್ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಾವು ಪ್ರತಿಷ್ಠಾನದ ಕಾರ್ಯಕಾರಿ ಮುಖ್ಯಸ್ಥರಾದ ಸುಮನಾ ಗೌತಮ್ ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿಕೊಟ್ಟರು.


ವೇದಿಕೆಯಲ್ಲಿ ಚೌಡ್ಲು ಗ್ರಾಪಂ ಅಧ್ಯಕ್ಷೆ ಗೀತಾ, ಸದಸ್ಯರಾದ ಮಹೇಶ್ ತಿಮ್ಮಯ್ಯ, ಸುರೇಶ್‌ಶೆಟ್ಟಿ, ಮಂಜುಳಾ ಸುಬ್ರಮಣಿ, ಸತ್ಯ, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸ್ನೇಹಶ್ರೀ, ಚೌಡ್ಲು ಶಾಲೆ ವಿದ್ಯಾರ್ಥಿ ನಿಶಾಂತ್, ಪ್ರತಿಷ್ಠಾನದ ಸ್ಥಾಪಕ ಗೌತಮ್ ಕಿರಗಂದೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net