ಭಕ್ತರ ಭಕ್ತಿಗೆ ಬರವಿಲ್ಲ

lkp 29-2
ಲೋಕಾಪುರ ಜ್ಞಾನೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬ್ರಹ್ಮಾನಂದ ಶ್ರೀಗಳು, ಶಿವಾನಂದ ಶೆಲ್ಲಿಕೇರಿ, ವಿ.ಬಿ. ಮಾಳಿ, ಗುರುರಾಜ ಉದಪುಡಿ, ಲೋಕಣ್ಣ ಭಜಂತ್ರಿ ಇತರರಿದ್ದರು.
Published on

ಲೋಕಾಪುರ: ಮಠ ಮತ್ತು ಶ್ರೀಗಳ ಮೇಲಿರುವ ಭಕ್ತಿಯೇ ಭಕ್ತರ ಶ್ರೀಮಂತಿಕೆ, ಈ ದೇಶಕ್ಕೆ ಮಳೆ ಇಲ್ಲದೆ ಬರ ಬರಬಹುದು. ಆದರೆ ಭಕ್ತರ ಭಕ್ತಿಗೆ ಎಂದೂ ಬರವಿಲ್ಲ ಎಂದು ನಿವೃತ್ತ ಮುಖ್ಯಶಿಕ್ಷಕ ವಿ.ಬಿ. ಮಾಳಿ ಹೇಳಿದರು.

ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ಶನಿವಾರ ಶ್ರೀ ಚತುರ್ಥ ಭುಜಂಗ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಅಂಗವಾಗಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಮುಧೋಳ ಕನ್ನಡ ಸಾಹಿತ್ಯ ಪರಿಷತ್ತ ತಾಲೂಕು ಘಟಕದ ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನೇಶ್ವರ ಮಠವು ಸಮಾಜಮುಖಿ ಕೆಲಸಗಳ ಮೂಲಕ ನಾಡಿನಲ್ಲೇ ವಿಶಿಷ್ಟವಾಗಿದೆ. ಕಾಯಕದ ಮೂಲಕ ಮಠಾಧಿಪತಿಗಳು ಆದರ್ಶವಾಗಿರಬೇಕು ಎಂಬುದಕ್ಕೆ ಬ್ರಹ್ಮಾನಂದ ಶ್ರೀಗಳೇ ಸಾಕ್ಷಿಯಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸದಲ್ಲಿ ಕೇಳರಿಯದ ಸಂಗತಿ ಎಂದರೆ ಮುಸ್ಲಿಂ ಗುರುವಿನಿಂದ ಓರ್ವ ಬ್ರಾಹ್ಮಣ ಅನುಗ್ರಹ ಪಡೆದು ಗುರು ಶಿಷ್ಯತ್ವವನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವುದನ್ನು ಕಾಣಬಹುದು. ಹಿಂದು- ಮುಸ್ಲಿಂ ಭಾವೈಕ್ಯ ಭಾವ ಇಲ್ಲಿದೆ. ಒಂದು ಕಡೆ ಅಜಮೀರ್ ಸಾಹೇಬರ ಗದ್ದುಗೆ ಇದೆ, ಇನ್ನೊಂದೆಡೆ ಪರಮಹಂಸರ ಸಜೀವ ವೃಂದಾವನ. ಈ ಕಡೆ ಆರಾಧನೆ, ಆ ಕಡೆ ಉರುಸು. ಗುರು ಶಿಷ್ಯರ ಆತ್ಮೀಯತೆಯ ಭಾವ ಕಣ್ಮನ ತಣಿಸುವಂತದ್ದಾಗಿದೆ ಎಂದರು.
ಸಾಹಿತಿ ಹಾಗೂ ಉಪನ್ಯಾಸಕ ಡಾ. ಲೋಕಣ್ಣ ಭಜಂತ್ರಿ ಮಾತನಾಡಿ, ಚತುರ್ಥ ಭುಜಂಗ ಸ್ವಾಮಿಗಳು ಲೀನರಾಗಿ 24 ವರ್ಷಗಳು ಕಳೆದಿವೆ. ಗುರುವಿಲ್ಲದೆ ಮಠವಲ್ಲ ಎಂಬಂತೆ ಶ್ರೀ ಚತುರ್ಥ ಭುಜಂಗ ಸ್ವಾಮಿಗಳ ಸುಪುತ್ರರಾದ ಬ್ರಹ್ಮಾನಂದ ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ಧಕ್ಷತೆಯಿಂದ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ದ್ವಾದಶ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗುರುರಾಜ ಉದಪುಡಿ, ಪಿಎಸ್‌ಐ ಕಾಡಪ್ಪ ಜಕ್ಕನ್ನವರ, ಮುಧೋಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ಎಸ್. ಪೂಜಾರಿ, ಲೋಕಾಪುರ ವಲಯ ಘಟಕದ ಅಧ್ಯಕ್ಷ ಎಸ್. ಎಂ. ರಾಮದುರ್ಗ, ಸಾಹಿತಿ ಬಸವರಾಜ ಹೂಗಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ಎಸ್.ಡಿ. ನಿಲಗುಂದ, ಶ್ರೀಮಠದ ಜಯರಾಮ ತಳಗಟ್ಟಿ, ನಿವೃತ್ತ ಶಿಕ್ಷಕ ಚಂದ್ರಕಾಂತ ರಂಗಣ್ಣವರ, ಕೃಷ್ಣಾ ಭಜಂತ್ರಿ, ಸಿದ್ದು ಹೂಗಾರ, ಆರ್.ಆರ್. ಕೋಲಾರ, ಸಿದ್ದು ವಿರಕ್ತಮಠ, ಪಿ.ಬಿ. ಹಿರೇಮಠ, ಪ್ರಕಾಶ ಬೆಳಗಲಿ, ಸುಜಾತಾ ಜೋಶಿ, ಜಗದೀಶ ಮಾರಂಗಪ್ಪನವರ, ಕೃಷ್ಣಾ ರಂಗಣ್ಣವರ, ಪತ್ರಕರ್ತ ಸಲೀಂ ಕೊಪ್ಪದ, ಲೋಕಾಪುರ ಕನ್ನಡ ಸಾಹಿತ್ಯ ಪರಿಷತ್ತ ವಲಯ ಘಟಕದ ಪದಾಧಿಕಾರಿಗಳು ಹಾಗೂ ಜ್ಞಾನೇಶ್ವಮಠ ಮಠದ ಭಕ್ತವೃಂದರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net