ಸಿದ್ದರಾಮಯ್ಯ ಸಿಎಂ ಅಗಿ ಮುಂದುವರೆಯುವುದು ಗ್ಯಾರಂಟಿ ಇಲ್ಲ : ಆರ್. ಅಶೋಕ್

r ashoka
Published on

ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಗ್ಯಾರಂಟಿ ಇಲ್ಲ. ಹೀಗಿರುವಾಗ ಅವರು ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ನೀಡಿರುವ ಅಂಕಕ್ಕೆ ಯಾವುದೇ ಬೆಲೆ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.

ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಶೂನ್ಯ ಅಂಕ ನೀಡಿದ್ದಾರೆ. ರಾಜ್ಯ ಸರ್ಕಾರದ 2 ವರ್ಷಗಳ ಸಾಧನೆಗೆ ನಾವು ಮೈನಸ್ ಶೂನ್ಯ ಅಂಕ ನೀಡಬಹುದಷ್ಟೇ. ಅವರಿಗೆ ಶೂನ್ಯ ಕೊಡುವುದೂ ವೇಷ್ಟು. ನಾವು ಅವರಿಂದ ಯಾವುದೇ ಅಂಕಗಳನ್ನು ನಿರೀಕ್ಷೆ ಮಾಡಲಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಸಚಿವರು ಗೃಹಕ್ಕೆ ಮಾತ್ರ ಸಚಿವರಾಗಿದ್ದಾರೆ. ಮೈಸೂರಿಗೆ ಸಿಎಂ ಮತ್ತು ಅವರ ಮಗ ಬೇಲಿ ಹಾಕಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಕನಕಪುರ, ಬೆಂಗಳೂರು ಸುತ್ತಮುತ್ತ ಬೇಲಿ ಹಾಕಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಎಂ.ಬಿ. ಪಾಟೀಲ್, ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಬೇಲಿ ಹಾಕಿಕೊಂಡಿದ್ದಾರೆ. ಕಲ್ಬುರ್ಗಿ ಅಂತು ಕೇಳುವಂತೆಯೇ ಇಲ್ಲ. ಹಾಗಾಗಿ ಇನ್ನೆಲ್ಲಿಗೆ ಡಾ.ಜಿ.ಪರಮೇಶ್ವರ್ ಗೃಹ ಸಚಿವರು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಹೀಗಾಗಿ ಅವರು ಸುದ್ದಿಗೋಷ್ಠಿ ನಡೆಸುತ್ತಿಲ್ಲ. ಸಿದ್ದರಾಮಯ್ಯ ಅವರಂತೆ ಸುದ್ದಿಗೋಷ್ಠಿ ಮಾಡಿ ಬೆಂಗಳೂರು ಕಾಲ್ತುಳಿತಕ್ಕೆ ಕಾರಣ ನಾನಲ್ಲ ಎನ್ನಬೇಕೆ? ಕಾಲ್ತುಳಿತ ಘಟನೆ ನಡೆದ ಮಾರನೆ ದಿನ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ರಾಜ್ಯಪಾಲರನ್ನು ನಾನು ಕರೆದಿಲ್ಲ ಎಂದರು. ನಿನ್ನೆ ನೋಡಿದರೆ ನಾನೇ ಕರೆದೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮಾನಸಿಕ ಸ್ಥಿತಿ ಸರಿ ಇದ್ದಿದ್ದರೆ ನಾನೇ ಕರೆದೆ ಎಂದು ಅಂದೇ ಒಪ್ಪಿಕೊಳ್ಳಬಹುದಿತ್ತಲ್ಲವೇ ಎಂದು ು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಅಧಿಕಾರದಿಂದ ಏನಾದರು ನೆಗೆದು ಬಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಅದರಲ್ಲಿ ನಮ್ಮದೇನು ಪಾತ್ರ ಇರುತ್ತದೆ? ಪ್ರತಿಪಕ್ಷವಾಗಿ ಬಿಜೆಪಿ ನೀಡುತ್ತಿರುವ ಎದುರೇಟಿಗೆ ಈಗಾಗಲೇ ಅವರು ವಿಲವಿಲ ಎಂದು ಒದ್ದಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳುವಂತೆ ಕಾಲ್ತುಳಿತ ಪ್ರಕರಣವನ್ನು ಬಿಜೆಪಿಯವರೇ ದೊಡ್ಡದು ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಂದರೆ ನಾವು ದೊಡ್ಡದು ಮಾಡದಿದ್ದರೆ ಇವರು ಮುಚ್ಚಿ ಹಾಕುತ್ತಿದ್ದರಲ್ಲವೇ ಎಂದು ಅವರು ಪ್ರಶ್ನಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ವಿವಿಧ ನಿಗಮಗಳ ಮಾಜಿ ಅಧ್ಯಕ್ಷರಾದ ಎಸ್. ಮಹದೇವಯ್ಯ, ಹೇಮಂತ್ ಕುಮಾರ್ ಗೌಡ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net