ಮಾನವೀಯತೆಗಿಂತ ದೊಡ್ಡ ತತ್ವ ಬೇರೊಂದಿಲ್ಲ

31bhr 1
Published on

ಬಾಳೆಹೊನ್ನೂರು: ಜೀವನದಲ್ಲಿ ನಮ್ಮ ಮಾತುಗಳು ಕೃತಿಯಾಗಬೇಕು. ಭಾಷಣಗಳು ಪರಿವರ್ತನೆಗೆ ಕಾರಣವಾಗಬೇಕು. ಪ್ರಪಂಚದಲ್ಲಿ ಮಾನವೀಯತೆಗಿಂತ ದೊಡ್ಡ ತತ್ವ ಬೇರೊಂದಿಲ್ಲ ಎಂದು ಗೌರಿಗದ್ದೆ ಯ ಶ್ರೀ ವಿನಯ್ ಗುರೂಜಿ ಹೇಳಿದರು.

ಪಟ್ಟಣದ ವಿಜಯಮಾತೆ ಚರ್ಚ್‌ನಿಂದ ಕ್ರಿಸ್ತ ಜಯಂತಿ ಹಾಗೂ ಹೊಸ ವರ್ಷದ ಅಂಗವಾಗಿ ಆಯೋಜಿಸಿದ್ದ ಸೌಹಾರ್ದ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬೈಬಲ್, ಕುರಾನ್, ಭಗವದ್ಗೀತೆಗಳು ಪ್ರಪಂಚದಲ್ಲಿಯೇ ಶ್ರೇಷ್ಠ ಗ್ರಂಥಗಳಾಗಿದ್ದು, ಇವುಗಳನ್ನು ಓದಿದವರು ಜೀವನದಲ್ಲಿ ಬದಲಾಗಲಿದ್ದಾರೆ. ಈ ಗ್ರಂಥಗಳು ಮನುಷ್ಯತ್ವ ಹೇಳಿವೆ. ಕಲಿಯುಗದಲ್ಲಿ ಸಂಘ, ಸಂಘಟನೆ ಮುಖ್ಯವಾಗಿದ್ದು, ನಾವು ಮಸೀದಿ, ಮಂದಿರ, ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಮಾಡುವ ಪ್ರಾರ್ಥನೆಗಳು ಇಡೀ ಊರನ್ನೇ ಬದಲು ಮಾಡಲಿದೆ. ಮನಸ್ಸಿನಲ್ಲಿನ ಆಧ್ಯಾತ್ಮಿಕತೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಸಮಾಜದಲ್ಲಿ ಕಣ್ಣೀರು ಹಾಕುವವರಲ್ಲಿ ದೇವರ ಸೇವೆ ನೋಡಬೇಕಿದೆ ಎಂದರು.

ಜಯಪುರ ಬದ್ರಿಯಾ ಜುಮಾ ಮಸೀದಿಯ ಧರ್ಮಗುರು ಮೌಲಾನ ಡಿ.ಎ.ಹಸನ್ ಸಖಾಫಿ ಮಾತನಾಡಿ, ಧರ್ಮಗಳು ಸುಂದರ ನಾಡನ್ನು ಕಟ್ಟಬೇಕಾದ ಸಂದರ್ಭದಲ್ಲಿ ಕಚ್ಚಾಟದಲ್ಲಿ ತೊಡಗಿವೆ. ಕುರಾನ್ ಎಂದಿಗೂ ಜಾತಿ, ಮತ, ಪಂಥ ಬೇಧ ಹೇಳಿಕೊಟ್ಟಿಲ್ಲ. ಸೌಹಾರ್ದತೆ ಎಂದರೆ ಅವರ ಧರ್ಮವನ್ನು ಆರಾಸುವುದರೊಂದಿಗೆ ಪರ ಧರ್ಮವನ್ನು ಗೌರವಿಸುವುದಾಗಿದೆ. ಭಾರತದಲ್ಲಿ ಧಾರ್ಮಿಕ ಒಗ್ಗಟನ್ನು ಕಾಪಾಡಬೇಕಿದೆ. ರಾಜಕಾರಣಿಗಳು ಅವರ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮಗಳ ನಡುವೆ ಕಂದಕ ತರುತ್ತಿದ್ದಾರೆ. ಪ್ರತಿಯೊಬ್ಬರೂ ಸಹ ಧರ್ಮಗುರುಗಳ ರೀತಿ ಜೀವಿಸಿದರೆ ಮಾತ್ರ ಕೋಮು ಸೌಹಾರ್ದತೆ ಕಾಪಾಡಲು ಸಾಧ್ಯ ಎಂದರು.

ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜಾ, ಕಿರಿಯ ಧರ್ಮಗುರು ಕೀರ್ತಿ ಕಿರಣ್, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಮುಖ್ಯಶಿಕ್ಷಕಿ ಸಿಸ್ಟರ್ ಡಯಾನ, ಉದ್ಯಮಿ ಕ್ಲಿರ್ಡ್ ಲಾರೆನ್ಸ್ ಸಿಕ್ವೇರಾ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಪ್ರಕಾಶ್ ಪಿಂಟೋ, ಓ.ಡಿ.ಸ್ಟೀನ್, ಪ್ರಿನ್ಸಿ, ಅನಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net