

ಯಲ್ಲಾಪುರ: ಚುನಾಯಿತ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದ ಅಡಿಯಲ್ಲಿ ಅಭಿವೃದ್ಧಿಗೆ ಅನುದಾನ ಸಿಗದಿರುವುದನ್ನು ಖಂಡಿಸಿ ಗ್ರಾಪಂ ಸದಸ್ಯರ ಹಕ್ಕಿಗೆ ಒತ್ತಾಯಿಸಿ ಗುರುವಾರ ತಾಪಂ ಆವಾರದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನಾ ಹೋರಾಟ ನಡೆಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ಬಾರದೇ ಅಭಿವೃದ್ಧಿ ಕುಂಠಿತವಾಗಿದೆ. ಕೇಂದ್ರದ 15ನೇ ಹಣಕಾಸು ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಅನುದಾನ ಬಾರದೇ ಒಂದೂವರೆ ವರ್ಷ ಆಗಿದೆ. ಯಾವುದೇ ವಸತಿ ಯೋಜನೆಗೆ ಹಣ ಬರುತ್ತಿಲ್ಲ. ಅರ್ಧಕ್ಕೆ ನಿಂತ ಮನೆಗಳಿಗೆ ಬಿಲ್ ಆಗುತ್ತಿಲ್ಲ. ಸರ್ಕಾರದಿಂದ ಅನುದಾನ ನೀಡಿಕೆಯಲ್ಲಿ ತಾರತಮ್ಯ ಆಗುತ್ತಿದೆ. ಹೀಗಾಗಿ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಜನಪ್ರತಿನಿಧಿಗಳು ಜಾಗೃತರಾಗಿದ್ದೇವೆ. ಸ್ಪಂದಿಸದೇ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದರು.
ಜಿಲ್ಲಾ ಸಮಿತಿಯ ಸದಸ್ಯ ಗಣೇಶ ಹೆಗಡೆ ಮಾತನಾಡಿ, ಜನಪ್ರತಿನಿಧಿಗಳಿಗಾಗಿ ಪ್ರತಿಭಟನೆ ಪ್ರಾರಂಭಿಸಬೇಕಾಗಿರುವುದು ದುರದೃಷ್ಟಕರ. ಅನುದಾನ ಇಲ್ಲದೇ ವ್ಯವಸ್ಥೆ ನಡೆಸುವ ಅಂತಿಮ ಯಾತ್ರೆ ಆರಂಭವಾಗಿದೆ. ಒಂದೂವರೆ ವರ್ಷದಿಂದ ಯಾವುದೇ ಅನುದಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸಮಿತಿ ಸದಸ್ಯ ಸುಬ್ಬಣ್ಣ ಕುಂಟೆಗಾಳಿ, ತಾಲೂಕು ಅಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ, ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ, ಇಡಗುಂದಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪ್ರಮುಖರಾದ ಸುಬ್ಬಣ್ಣ ಉದ್ದಾಬೈಲ್, ಸತೀಶ ನಾಯ್ಕ, ಕೆ.ಟಿ. ಹೆಗಡೆ, ಮೀನಾಕ್ಷಿ ಭಟ್ಟ, ಭಗೀರಥ ನಾಯ್ಕ, ಶ್ರೀಪತಿ ಮುದ್ದೆಪಾಲ ಸೇರಿ ತಾಲೂಕಿನ ವಿವಿಧ ಗ್ರಾ.ಪಂ. ಸದಸ್ಯರು ಭಾಗವಹಿಸಿದ್ದರು. ಶಿರಸಿ, ಮುಂಡಗೋಡ ತಾಲೂಕಿನ ವಿವಿಧ ಗ್ರಾ.ಪಂ.ಗಳ ಸದಸ್ಯರು ಭಾಗವಹಿಸಿ, ಬೆಂಬಲ ಸೂಚಿಸಿದರು.