

ಶಿರಹಟ್ಟಿ: ತಾಲೂಕಿನ ಚಿಕ್ಕಸವಣೂರ, ವಡವಿ, ಬೆಳಗಟ್ಟಿ, ದೇವಿಹಾಳ ಗ್ರಾಮಗಳಲ್ಲಿ ಬರ ಅಧ್ಯಯನ ತಂಡವು ಶನಿವಾರ ವೆಳೆ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆಯಿತು.
ಚಿಕ್ಕಸವಣೂರ ಗ್ರಾಮದಲ್ಲಿ ರೈತರಾದ ವೆಂಕಟೇಶ ಲಮಾಣಿ, ರಮೇಶ ಶ್ಯಾಗೋಟಿ ಅವರು ಕಾಳು ಕಟ್ಟದಿರುವ ಗೋವಿನ ಜೋಳದ ತೆನೆಗಳನ್ನು ಅಧಿಕಾರಿಗಳಿಗೆ ತೋರಿಸಿ ಅಳಲು ತೋಡಿಕೊಂಡರು. ‘ಸಾವಿರಾರು ರೂ. ಖರ್ಚು ಮಾಡಿ ಬೆಳೆಯಲಾದ ಗೋವಿನ ಜೋಳ ಫಸಲು ಸಕಾಲಕ್ಕೆ ಮಳೆಯಾಗದೆ ಕಾಳು ಕಟ್ಟಿಲ್ಲ. ಕೀಟ ಹತ್ತಿದ ಮೆಕ್ಕೆ ಜೋಳದ ತೆನೆ, ದಂಟು ದನಕರುಗಳಿಗೆ ಮೇವು ಕೂಡ ಆಗಲಾರದು. ಪರಿಸ್ಥಿತಿ ಹೀಗಾದರೆ ನಾವು ನಮ್ಮ ಜಾನುವಾರು ಬದುಕುವುದಾದರು ಹೇಗೆ? ಎಂದು ವಿವರಿಸಿದರು.
ಅಲ್ಲದೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಹಣ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಹೊಟ್ಟೆಪಾಡಿಗೆ ದುಡಿಯಲು ಗುಳೆ ಹೋಗುವ ತಾಪತ್ರಯ ತಪ್ಪಿಲ್ಲ ಎಂದು ಮನವರಿಕೆ ಮಾಡಿದರು.
ತಹಸೀಲ್ದಾರ್ ಅನಿಲ ಬಡಿಗೇರ, ತಾಪಂ ಇಒ ಡಾ. ಎನ್.ಎಚ್. ಓಲೇಕಾರ, ಕೃಷಿ ಅಧಿಕಾರಿ ರೇವಣೆಪ್ಪ ಮನಗೂಳಿ, ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ ಇತರೆ ಅಧಿಕಾರಿಗಳಿದ್ದರು.