

ಸವಣೂರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿನಾಯಕ ಕೃಷ್ಣ ಗೋಕಾಕ ಅವರು ಜನ್ಮಸ್ಥಳವಾದ ಸವಣೂರಿನಲ್ಲಿ ಅಪರಿಚಿತರಾಗಿದ್ದಾರೆ.
ಪಟ್ಟಣದಲ್ಲಿ ಗೋಕಾಕ ಅವರು ಜನಿಸಿದ ಮನೆ, ಕಲಿತ ಶಾಲೆಗಳು ಅಭಿವೃದ್ಧಿ ಕಂಡಿಲ್ಲ. ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತವಾಗಿದೆ. ಡಾ. ವಿ.ಕೃ. ಗೋಕಾಕ ಅವರ ಬರಹ ಹಾಗೂ ಸಾಧನೆಯ ಕುರಿತು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತಿಳಿಸುವ ಯಾವ ವ್ಯವಸ್ಥೆ ಅಲ್ಲಿ ಇಲ್ಲವಾಗಿದೆ.
ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಡಾ. ವಿ.ಕೃ. ಗೋಕಾಕ ಅವರನ್ನು ಅವರ ಹುಟ್ಟೂರಾದ ಸವಣೂರಿನಲ್ಲಿ ನಿತ್ಯ ಸ್ಮರಿಸುವಂತಹ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಳ್ಳುವುದು ಅವಶ್ಯವಾಗಿದೆ.
1958ರಲ್ಲಿ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1967ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು 1979ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ, 1961ರಲ್ಲಿ ಪದ್ಮಶ್ರೀ ಪ್ರಶಸ್ತಿ, 1965ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ಪದವಿ, 1960ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿ ಹೆಸರಿಸಲಿಲ್ಲ. ಕನ್ನಡ ಸಾಹಿತ್ಯಲೋಕಕ್ಕೆ ಅವರು 1969 ರಿಂದ 1984ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಯಾವುದೇ ಕೃತಿ ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ, ಗೋಕಾಕರಿಗೆ ಭಾರತ ಸಿಂಧು ರಶ್ಮಿ ಕೃತಿಗೆ ಪ್ರಶಸ್ತಿ ಬಂದಿದೆ ಎಂದು ಜನ ಭಾವಿಸಿದ್ದಾಗಿ ದಾಖಲಾತಿಗಳಲ್ಲಿದೆ.
ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಡಳಿತ ಮಂಡಳಿ ಎಚ್ಚೆತ್ತು ಸವಣೂರಿನಲ್ಲಿ ನಿತ್ಯ ಡಾ. ವಿ.ಕೃ.ಗೋಕಾಕ ಅವರನ್ನು ಸ್ಮರಿಸುವ ಕಾರ್ಯ ಕೈಗೊಳ್ಳಲು ಮುಂದಾಗಬೇಕು.ಪರಶುರಾಮ ಈಳಗೇರ, ಕರವೇ ತಾಲೂಕು ಘಟಕ ಅಧ್ಯಕ್ಷಸವಣೂರ ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಗೋಕಾಕರ ಬದುಕು ಹಾಗೂ ಬರಹ ಕುರಿತು ಸಮಗ್ರ ಮಾಹಿತಿ ಒದಗಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಮೊಹಮ್ಮದ ಖಿಜರ್, ಉಪ ವಿಭಾಗಾಧಿಕಾರಿ
ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ , ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಹಯೋಗದಲ್ಲಿ ಆ. 9ರಂದು ಮಧ್ಯಾಹ್ನ 3 ಗಂಟೆಗೆ ಡಾ. ವಿ.ಕೃ. ಗೋಕಾಕ ಅವರ 114ನೇ ಜನ್ಮ ದಿನವನ್ನು ಪಟ್ಟಣದ ಡಾ.ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ರಘುನಂದನಮೂರ್ತಿ ಉದ್ಘಾಟಿಸುವರು. ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಡಿ.ಎನ್. ಗುಂಜಳ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಆನಂದ ಇಂದೂರ ಉಪನ್ಯಾಸ ನೀಡುವರು. ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್, ತಹಸೀಲ್ದಾರ್ ಗಣೇಶ ಸವಣೂರ, ಬಿಇಒ ಎಂ.ಎಫ್. ಬಾರ್ಕಿ, ಪುರಸಭೆ ಮುಖ್ಯಾಧಿಕಾರಿ ಎಂ.ಬಿ. ದೊಡ್ಡಣ್ಣನವರ, ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರಾದ ಸತೀಶ ಕುಲಕರ್ಣಿ, ಮಲ್ಲಾರಪ್ಪ ತಳ್ಳಿಹಳ್ಳಿ, ಮಂಜುಳಾ ರಾಶಿನಕರ, ಕಾರ್ಯದರ್ಶಿ ಸಿದ್ದಲಿಂಗೇಶ ರಂಗಣ್ಣನವರ ಇತರರು ಪಾಲ್ಗೊಳ್ಳುವರು.