ದೇವರಿಲ್ಲದ ತಾಣ ಸಿಗುವುದಿಲ್ಲ

03_02_Mdy_Tempal Ingration 01
Published on

ಮಂಡ್ಯ: ವಿಜ್ಞಾನ ಎಷ್ಟೇ ಬೆಳೆದರೂ ಕೂಡ ಭಗವಂತನಿಲ್ಲದ ತಾಣವಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದಲ್ಲಿ ಸೋಮವಾರ ಉರುಮಾರಮ್ಮ ಮತ್ತು ಮಹಾದೇವಮ್ಮ ದೇವಿ ದೇವತಾ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಪ್ರತಿಯೊಬ್ಬರೂ ದೇವರಿದ್ದಾನೆಂಬ ಭಾವನೆಯಿಂದ ಬದುಕಿದರೆ ಜೀವನದಲ್ಲಿ ಖುಷಿ ಕಾಣಲು ಸಾಧ್ಯ. ಪ್ರಪಂಚದ ಯಾವ ಕೆಲಸ ಮಾಡಿದರೂ ನಂತರ ಭಗವಂತನ ಧ್ಯಾನ ಮಾಡುವ ಮನಸ್ಸಿದ್ದರೆ ಭಗವಂತ ಆಶೀರ್ವಾದ ಮಾಡುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಮನಸ್ಸನ್ನು ಭಗವಂತನಲ್ಲಿ ತೊಡಗಿಸಿ ಎಂದು ಹೇಳಿದರು.

ಮಠಗಳನ್ನು ಕಟ್ಟುವುದು ಸ್ವಾಭಿಮಾನದ ಸಂಕೇತ. ಆದ್ದರಿಂದ ನೊಂದವರು ಸಮಸ್ಯೆಗಳು ಇದ್ದರೆ ಪೊಲೀಸ್ ಠಾಣೆ ಅಥವಾ ಕೋರ್ಟ್‌ಗೆ ಹೋಗಬೇಡಿ. ಮಠಕ್ಕೆ ಬನ್ನಿ ಎಂದು ಭಕ್ತರಿಗೆ ಸಲಹೆ ನೀಡಿದ ಅವರು, ಶ್ರೀಮಠದ ಭಕ್ತರು ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿದರು.
ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಮಾತನಾಡಿ, ಒಕ್ಕಲುತನದ ಮಠಗಳಲ್ಲಿ ಶ್ರೇಷ್ಠವಾದ ಮಠ ಆದಿಚುಂಚನಗಿರಿ. ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಹಾನ್ ಮೇಧಾವಿಗಳಾಗಿದ್ದು, ಮಠವನ್ನು ಬೃಹದಾಕಾರವಾಗಿ ಬೆಳೆಸಿದ್ದಾರೆ. ವಿದ್ವತ್ ಹೊಂದಿರುವ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಠವನ್ನು ವಹಿಸಿದ್ದು, ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ದೇಶ ಮತ್ತು ವಿದೇಶಗಳಲ್ಲಿ ಚುಂಚನಗಿರಿ ಶಾಖಾ ಮಠಗಳಿದ್ದು, ಸಹಸ್ರಾರು ಭಕ್ತರನ್ನು ಹೊಂದಿದೆ. ಮಠವನ್ನು ಬೆಳೆಸುವ ಜತೆಗೆ ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮಠದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಹಿಂದೆ ದೇಣಿಗೆ, ದವಸ- ಧಾನ್ಯ ನೀಡುವ ಮೂಲಕ ಪ್ರತಿ ಹಳ್ಳಿಗಳಲ್ಲೂ ನೆರವಾಗುತ್ತಿದ್ದರು. ಮತ್ತೆ ಅದು ಪುನರಾವರ್ತನೆಯಾಗಬೇಕು ಎಂದರು.

ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಮಾತನಾಡಿ, ಸಂಬಂಧದ ಬೆಸುಗೆಯಾಗಿ ದೇವಸ್ಥಾನ ನಿರ್ಮಾಣವಾಗಿದೆ. ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ 8 ದೇವಸ್ಥಾನ ಪುನರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಪ್ರತಿಯೊಬ್ಬರ ಮನಸ್ಸಿನಲ್ಲೂ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಆಶಿಸಿದರು.

ಗ್ರಾಪಂ ಸದಸ್ಯ ಕೃಷ್ಣ, ವಿಎಸ್‌ಎಸ್‌ಎನ್ ನಿರ್ದೇಶಕ ಎಂ.ಬಿ.ಕೃಷ್ಣ, ಮುಖಂಡರಾದ ಪಲ್ಲವಿ, ತಗ್ಗಹಳ್ಳಿ ಕೃಷ್ಣ, ಜವನೇಗೌಡ, ನಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net