ಅಕ್ಷರ ಕಲಿಕೆಗೆ ಲಿಂಗ ತಾರತಮ್ಯ ಸಲ್ಲದು

CTD 8 MURUGA SJM
Published on

ಚಿತ್ರದುರ್ಗ: ಹೆಣ್ಣುಮಕ್ಕಳೆಂದರೆ ಅವರಿಗೆ ಶೀಘ್ರ ಮದುವೆ ಮಾಡಿ ಕಳಿಸುವುದೆಂಬ ಮನೋಭಾವನೆ ಪಾಲಕರಲ್ಲಿ ಕೈಬಿಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶೆ ಬಿ.ಎಸ್.ರೇಖಾ ಹೇಳಿದರು.
ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣಕ್ಕೆ ನಮ್ಮ ಆದ್ಯತೆಯಾಗಿರಬೇಕು ಎಂದರು.
ಓದುವ ಹಂಬಲ ಎಲ್ಲರಲ್ಲೂ ಇರುತ್ತದೆ. ಹೆಣ್ಣು-ಗಂಡು ಎಂಬ ಭೇದ ಮಾಡದೆ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಹೇಳಿದರು.
ನಮ್ಮ ಸಂಸ್ಕೃತಿ ಜಗತ್ತಿನಲ್ಲೇ ಅತ್ಯಂತ ಉನ್ನತದಲ್ಲಿದೆ. ನಮ್ಮ ಸಂಸ್ಕಾರ, ಸಂಸ್ಕೃತಿಗೆ ಅಪಾರ ಮನ್ನಣೆಯಿದೆ. ಬಾಹ್ಯ ಆಕರ್ಷಣೆಗೆ ಒಳಗಾಗದೆ ವಿದ್ಯೆ ಕಲಿತು ವಿದ್ಯಾರ್ಥಿಗಳು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು. ದೇಶವನ್ನು ಮುನ್ನಡೆಸುವ ದೃಢ ನಿರ್ಧಾರ ತಮ್ಮದಾಗಬೇಕು ಎಂದರು.
ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮುಂದಿನ ಜೀವನ ಚೆನ್ನಾಗಿರಬೇಕೆಂದರೆ ವಿದ್ಯಾಭ್ಯಾಸ ಹಾಗೂ ನಮ್ಮ ನಿರ್ಧಾರಗಳು ಮುಖ್ಯ. ಅಧ್ಯಯನ ಮಾಡುವ ಜಾಗದಲ್ಲಿ ಕಿರಿ ಕಿರಿ ಇರಬಾರದು. ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಎಚ್ಚರವಿರಲಿ. ಓದಿನ ಜತೆಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯನಿರ್ವಹಣಾಧಿಕಾರಿ ಎಂ.ಭರತ್‌ಕುಮಾರ್, ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ, ಕ್ರೀಡಾಪಟು ಎಂ.ರಕ್ಷಿತಾ ಮಾತನಾಡಿದರು.
ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥ ಎನ್.ಚೆಲುವರಾಜು, ಎಂ.ಎಸ್.ಪರಮೇಶ್ವರ, ರಕ್ಷಿತಾ, ಅಮೃತಸಿರಿ, ಬಿ.ಕಾವ್ಯಾ ಇದ್ದರು. ಪವಿತ್ರಾ ಪ್ರಾರ್ಥಿಸಿದರು. ಚೇತನಾ, ಫಾತಿಮಾ ಕೌಸರ್ ನಿರೂಪಿಸಿದರು. ಎಂ.ಎಸ್.ಪರಮೇಶ್ವರ್ ವಂದಿಸಿದರು.

ಉತ್ತಮ ಸಾಧನೆ ಮಾಡಬೇಕು: ವಿದ್ಯಾರ್ಥಿಗಳು ಪಠ್ಯಾಧ್ಯಯನಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳೆಡೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಉತ್ತಮ ಸಾಧನೆ ಮಾಡಬೇಕು.-ಎಂ.ಭರತ್‌ಕುಮಾರ್, ಸಿಇಒ, ಎಸ್‌ಜೆಎಂ ವಿದ್ಯಾಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net