ಹಸಿದು ಬಂದವರಿಗಿಲ್ಲ ಅನ್ನ

IMG_20250710_182558
Published on

ಸಿ.ಎಸ್​.ವಿಶ್ವನಾಥ ಶಾಸ್ತ್ರಿ ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದಿಂದ ಕೆಲಸ ಕಾರ್ಯಕ್ಕೆ ಪಟ್ಟಣಕ್ಕೆ ಬರುವ ಮತ್ತು ಪಟ್ಟಣದಲ್ಲೇ ಇರುವ ನಿರ್ಗತಿಕರಿಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಎರಡೊತ್ತಿನ ಊಟ ನೀಡುವ ಉದ್ದೇಶದಿಂದ ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದ ಮಹತ್ವಾಕಾಂ ಯೋಜನೆ ಇಂದಿರಾ ಕ್ಯಾಂಟೀನ್​ ಪಟ್ಟಣದಲ್ಲಿ ಸೇವೆ ಒದಗಿಸುವ ಬದಲಿಗೆ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

ಸರ್ಕಾರದಿಂದ ಸ್ಥಳಿಯ ಆಡಳಿತದಡಿ ಕ್ಯಾಂಟೀನ್​ ನಡೆಸಲು ಗುತ್ತಿಗೆ ಪಡೆದವರು ನಂತರ ರುಚಿ&ಶುಚಿಯಾದ ಊಟ ನೀಡದೇ ಮನ ಬಂದಂತೆ ನಡೆಸುತ್ತಿದ್ದು, ಅವ್ಯವಹಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕ್ಯಾಂಟೀನ್​ನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಂದ ಬಡವರಿಗೆ, ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ ತಿಂಡಿ ಮತ್ತು ಊಟ ಸಮರ್ಪಕವಾಗಿ ಸಿಗುತ್ತಿಲ್ಲಾ. ಅದೆಷ್ಟೋ ಮಂದಿ ಕ್ಯಾಂಟೀನ್​ಗೆ ಬಂದು ತಿಂಡಿ ಇಲ್ಲ, ಊಟ ಮುಗಿದಿದೆ ಎಂಬ ಮಾತು ಕೇಳಿ ವಾಪಸ್​ ಹೋಗುವಂತಾಗಿದೆ.

ಇಂದಿರಾ ಕ್ಯಾಂಟೀನ್​ ಆರಂಭದಲ್ಲಿ ಎಲ್ಲ ಸೌಲಭ್ಯಗಳನ್ನು ಗುತ್ತಿಗೆದಾರರು ಒದಗಿಸಿ ಕೊಡುತ್ತಿದ್ದರು. ಕಾಲಕ್ರಮೇಣ ಇದರ ಪರಿಸ್ಥಿತಿ ಬದಲಾಗುತ್ತಾ ಬಂದಿದೆ. ಮೊದಲು ರುಚಿಕರವಾದ ತಿಂಡಿ, ಊಟ ನೀಡುತ್ತಿದ್ದ ಕ್ಯಾಂಟೀನ್​ ಇಂದು ಒಂದಲ್ಲ -ಒಂದು ಸಮಸ್ಯೆಯಿಂದ ಬಳಲುತ್ತಿದೆ. ಕಳೆದ ಒಂದು ವಾರದಿಂದ ಅಕ್ಕಿ ಇಲ್ಲದೆ ಅಲ್ಲಿನ ಅಡುಗೆ ಸಹಾಯಕರು ಅಂಗಡಿಯಿಂದ ಕಡಿಮೆ ದರದ ಅಕ್ಕಿಯನ್ನು ತಂದು ಅಡುಗೆ ಮಾಡಿ ಕ್ಯಾಂಟೀನ್​ ನಡೆಸುತ್ತಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಗುತ್ತಿಗೆ ಪಡೆದವರು ನಾಪತ್ತೆಯಾಗಿದ್ದಾರೆ, ಕಳೆದ ಎರಡು ತಿಂಗಳಿನಿಂದ ಸಮರ್ಪಕ ದಿನಸಿ ಸರಬರಾಜು ಆಗುತ್ತಿಲ್ಲಾ, ಇಂತಹ ಪರಿಸ್ಥಿತಿಯಲ್ಲಿ ಕೇವಲ 20 ರಿಂದ 30 ಮಂದಿಗೆ ಮೊಸರನ್ನ ಕೊಟ್ಟು ಊಟ ಮುಗಿದಿದೆ ಎಂದು ಹೇಳುತ್ತಿದ್ದಾರೆ.

ಅಡುಗೆಗೆ ಸಂಪು ನೀರು ಬಳಕೆ

ಕ್ಯಾಂಟೀನ್​ನಲ್ಲಿ ಶುದ್ಧ ಕುಡಿಯುವ ನೀರಿಲ್ಲದೇ ಸಂಪು ನೀರನ್ನೇ ಬಟ್ಟೆಯಲ್ಲಿ ಶೋಧಿಸಿ ಅಡುಗೆಗೆ ಮತ್ತು ಕುಡಿಯುವುದಕ್ಕೆ ಬಳಸುತ್ತಿರುವುದು ಶೋಚನೀಯ. ಸರ್ಕಾರ ಬಡವರಿಗೆ, ಹಸಿದವರಿಗೆ ಊಟ ಕೊಡಬೇಕೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್​ ನಿರ್ಮಿಸಿದೆ. ಆದರೆ ಕರ್ಮಕಾಂಡ ಈ ಕ್ಷೇತ್ರದಲ್ಲಿ ಅವ್ಯವಸ್ಥೆಗಳು ನಡೆಯುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

ಗೋಲ್​ ಮಾಲ್​

ವೇಳಾ ಪಟ್ಟಿಯಂತೆ ಕ್ಯಾಂಟೀನ್​ನಲ್ಲಿ ತಿಂಡಿ, ಊಟ ವಿತರಣೆಯಾಗುತ್ತಿಲ್ಲ. ಪ್ರತಿದಿನ ಇಡ್ಲಿ ಕಡ್ಡಾಯ ಜತೆಗೆ ಪುಲಿಯೋಗೆರೆ, ಕಾರಾಬಾತ್​, ಪೊಂಗಲ್​, ರವೆ ಕಿಚಡಿ, ಚಿತ್ರನ್ನ, ವಾಂಗಿಬಾತ್​, ಕೇಸರಿಬಾತ್​, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಮತ್ತು ತರಕಾರಿ ಸಾಂಬರ್​ ಜತೆಗೆ ಮೊಸರನ್ನ ಕಡ್ಡಾಯವೆಂದು ವೇಳಾ ಪಟ್ಟಿಯಲ್ಲಿ ಸರ್ಕಾರ ಗುತ್ತಿಗೆದಾರರಿಗೆ ತಿಳಿಸಿದೆ. ಆದರೆ ಇದನ್ನು ನಡೆಸುವ ಗುತ್ತಿಗೆದಾರರು ಇವೆಲ್ಲವನ್ನು ಗಾಳಿಗೆ ತೂರಿ ಕೇವಲ ಸರ್ಕಾರಕ್ಕೆ ಪ್ರತಿನಿತ್ಯ 1,500 ಟೋಕನ್​ ಲೆಕ್ಕ ನೀಡಿ ಗೋಲ್ಮಾಲ್​ ಮಾಡುತ್ತಿದ್ದಾರೆ. ಇದಕ್ಕೆ ಕ್ಯಾಂಟೀನ್​ನಲ್ಲಿ ತಯಾರು ಮಾಡುವ ತಿಂಡಿ ಅಡುಗೆ ಬೆರಳೆಣಿಕೆಗೆ ಮಾತ್ರ ಸಿಗುತ್ತಿದ್ದು, ನಿತ್ಯ ತಿಂಡಿ ಊಟ ಸಿಗದೆ ವಾಪಸ್​ ಹೋಗುತ್ತಿರುವ ಬಡ ಕೂಲಿ ಕಾರ್ಮಿಕರು, ಗ್ರಾಹಕರು ಎಷ್ಟೋಜನ ಇದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಕ್ಯಾಂಟೀನ್​ನ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net