ದಾರಿ ಯಾವುದಯ್ಯ ರೈತ ಸಂಪರ್ಕ ಕೇಂದ್ರಕ್ಕೆ?

There is no farmer contact center.
sulibele farmer contact center.
Published on

ರೈತರಿಂದ ಅಂತರ ಕಾಯ್ದುಕೊಂಡ ಕಚೇರಿ ನಾಮಫಲಕ ಅಳವಡಿಸದ ಕೃಷಿ ಇಲಾಖೆ

ಮಂಜು ಅತ್ತಿಬೆಲೆ ಸೂಲಿಬೆಲೆ
ಹೊಸಕೋಟೆ ತಾಲೂಕಿನ ಹೋಬಳಿ ಕೇಂದ್ರವಾದ ಸೂಲಿಬೆಲೆಯಲ್ಲಿ ರೈತ ಸಂಪರ್ಕ ಕೇಂದ್ರ ಇದ್ದೂ ಇಲ್ಲದಂತಾಗಿದೆ. ನೂತನ ಕಟ್ಟಡ ನಿರ್ಮಾಣವಾಗಿ 3 ವರ್ಷಗಳೇ ಕಳೆದರೂ ಇಲ್ಲಿಗೆ ಸುರಕ್ಷಿತ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಕನಿಷ್ಠ ರೈತ ಸಂಪರ್ಕ ಕೇಂದ್ರ ಎಂದು ಗುರುತಿಸಲು ಅನುಕೂಲವಾಗುವಂತೆ ನಾಮಫಲಕವನ್ನೂ ಅಳವಡಿಸದಿರುವುದು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸೂಲಿಬೆಲೆ ಪಟ್ಟಣದಿಂದ ಸುಮಾರು 2 ಕಿ.ಮೀ ದೂರವಿರುವ ಇಲಾಖೆಯ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಹುಡುಕಾಡಿದರೂ ಈ ಕೇಂದ್ರ ಸಿಗುವುದೇ ಕಷ್ಟ. ಅನೇಕರು ಕಚೇರಿ ಹುಡುಕಿ ಸುಮ್ಮನಾಗಿರುವುದೂ ಉಂಟು ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಉತ್ತಮ ರಸ್ತೆ ಸಂಪರ್ಕವಿಲ್ಲದೆ ಮಳೆಗಾಲದಲ್ಲಿ ಕೆಸರಿನ ಗದ್ದೆಯಂತಾಗುವ ರಸ್ತೆಯನ್ನು ಕನಿಷ್ಠ ಡಾಂಬರೀಕರಣಗೊಳಿಸುವ ಕೆಲಸವೂ ನಡೆದಿಲ್ಲ. ಒಟ್ಟಾರೆ ರೈತ ಸಂಪರ್ಕ ಕೇಂದ್ರ ನಾಮ್‌ಕೇವಾಸ್ತೆ ಆಗಿದೆ. ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದ್ದರೂ ಅದರ ಪ್ರಯೋಜನವಂತೂ ರೈತರಿಗೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.


ಸೂಲಿಬೆಲೆ ಹೊರವಲಯದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಕಟ್ಟಡ ಉದ್ಘಾಟನೆಗೊಂಡು 3 ವರ್ಷಗಳೇ ಕಳೆದರೂ ಸಂಪರ್ಕ ಕೇಂದ್ರದ ನಾಮಫಲಕ ಗೋಚರಿಸುತ್ತಿಲ್ಲ, ರೈತರಿಗೆ ಕಚೇರಿ ವಿಳಾಸವೇ ತಿಳಿಯದಂತಾಗಿದೆ.
ಪ್ರೇಮಕುಮಾರ್, ಅಧ್ಯಕ್ಷರು, ಕಸಾಪ, ಸೂಲಿಬೆಲೆ.


ರೈತರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ರೈತ ಸಂಪರ್ಕ ಕೇಂದ್ರ ರೈತರಿಂದ ಬಹುದೂರ ಉಳಿದುಕೊಂಡಿದೆ. ಕೃಷಿ ಇಲಾಖೆಯ ಯಾವುದೇ ಯೋಜನೆಗಳ ಮಾಹಿತಿ ಸಾರ್ವಜನಿಕರಿಗೆ ಅಲಭ್ಯ. ಕೇಂದ್ರ ಎಲ್ಲಿದೆ ಎಂದು ಹುಡುಕುವುದರಲ್ಲಿಯೇ ಕಾಲಹರಣವಾಗುತ್ತಿದೆ.
ಬಿ.ಎನ್.ಮಂಜುನಾಥ್, ರೈತ,ಬೆಟ್ಟಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net