ಬೋಗಿ ಉತ್ಪಾದನಾ ಘಟಕದ ಸ್ಥಾಪನೆ ಇಲ್ಲ

Train 8 Feb 2
Published on

ಬೆಂಗಳೂರು: ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ ವಾಗಿದೆ. ಕೋಲಾರದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಬೋಗಿ ಉತ್ಪಾದನಾ ಘಟಕದ ಬದಲು ರೈಲು ದುರಸ್ತಿ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ. ಆ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕಡಿತವಾಗುವಂತಾಗಿದೆ.

ರಾಜ್ಯ ರೈಲ್ವೆ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ 2012-13ರಲ್ಲಿ ಅಂದಿನ ರೈಲ್ವೆ ಖಾತೆಯ ಮಾಜಿ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಕೋಲಾರದಲ್ಲಿ 1,460 ಕೋಟಿ ರೂ. ವೆಚ್ಚದ ಪ್ರಯಾಣಿಕರ ರೈಲು ಬೋಗಿಗಳ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಘೋಷಣೆಯಾಗುವಂತೆ ಮಾಡಿದ್ದರು. ಅದಾದ ನಂತರದ ಬಜೆಟ್​ನಲ್ಲೂ ಅದು ಪುನರಾವರ್ತನೆಯಾಗಿತ್ತು. ಆದರೆ, ಅದು ಜಾರಿಯಾಗಿಲ್ಲ. ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘಟಕ ಸ್ಥಾಪನೆಗೆ ಹಣ ಮೀಸಲಿಟ್ಟು, ಕೋಲಾರದಲ್ಲಿ ಯೋಜನೆಗಾಗಿ ಕಾಯ್ದಿರಿಸಲಾಗಿದ್ದ 1,123 ಎಕರೆ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ನಂತರ ಸರ್ಕಾರಗಳು ಬದಲಾಗಿ, ಯೋಜನೆಗೆ ಗ್ರಹಣ ಹಿಡಿಯುವಂತಾಗಿತ್ತು.

5 ಸಾವಿರ ಉದ್ಯೋಗ ಸೃಷ್ಟಿ: ರೈಲು ಬೋಗಿ ಘಟಕ ಸ್ಥಾಪನೆ ನಂತರ, ವಾರ್ಷಿಕವಾಗಿ ಪ್ರಯಾಣಿಕರು ಸಂಚರಿಸುವ ಸಾವಿರ ಬೋಗಿಗಳ ಉತ್ಪಾದನೆ ಗುರಿ ಹೊಂದಲಾಗಿತ್ತು. ಆ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಒಪ್ಪಂದವೂ ನಡೆದಿತ್ತು. ಅಲ್ಲದೆ, ಘಟಕ ಸ್ಥಾಪನೆ ನಂತರ 5 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿತ್ತು.

ಯೋಜನೆ ಕೈಬಿಟ್ಟ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ 2020-21ನೇ ಸಾಲಿನ ಬಜೆಟ್​ನಲ್ಲಿ ಯೋಜನೆಯನ್ನು ಕೈಬಿಟ್ಟಿದೆ. ಅದರ ಬದಲು 495.3 ಕೋಟಿ ರೂ. ವೆಚ್ಚದ ರೈಲು ದುರಸ್ತಿ ಘಟಕ ಸ್ಥಾಪನೆ ಕುರಿತು ಪ್ರಸ್ತಾಪಿಸಲಾಗಿದೆ. ಈ ಯೋಜನೆಯಿಂದಾಗಿ ಕೇವಲ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಸದ್ಯ ಕಪುರ್ತಲ, ರಾಯ್ಬರೇಲಿ ಮತ್ತು ಚೆನ್ನೈನಲ್ಲಿ ರೈಲು ಬೋಗಿ ತಯಾರಿಕಾ ಘಟಕವಿದೆ. ಕೋಲಾರದಲ್ಲಿ ಸ್ಥಾಪನೆಯಾಗಿದ್ದರೆ, ದೇಶದಲ್ಲಿನ 4ನೇ ಬೋಗಿ ಉತ್ಪಾದನಾ ಘಟಕವಾಗುತ್ತಿತ್ತು.

ಕೋಚ್ ಫ್ಯಾಕ್ಟರಿ ಬದಲು ವರ್ಕ್​ಶಾಪ್  

ನವದೆಹಲಿ: ಭಾರತದಲ್ಲಿ ಸಾಕಷ್ಟು ರೈಲ್ವೆ ಕೋಚ್ ಫ್ಯಾಕ್ಟರಿಗಳಿವೆ. ಹೀಗಾಗಿ ಕೋಲಾರದಲ್ಲಿ ರೈಲ್ವೆ ವರ್ಕ್​ಶಾಪ್ ಪ್ರಾರಂಭ ಮಾಡಲಿದ್ದೇವೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಕ್​ಶಾಪ್ ಮಾಡುವುದರಿಂದ ಉದ್ಯೋಗ ಪ್ರಮಾಣ ಕಡಿಮೆಯಾಗುವುದಿಲ್ಲ. ಇದನ್ನು ನಾನು ಮೊದಲಿಂದಲೂ ಹೇಳಿದ್ದೇನೆ. ರೈಲ್ವೆ ಫ್ಯಾಕ್ಟರಿ ಯೋಜನೆಗಾಗಿ ಹಿಂದೆ ಇರಿಸಿದ್ದ 900 ಕೋಟಿ ರೂ. ಹಾಗೆ ಇದೆ. ಅದನ್ನು ವರ್ಕ್​ಶಾಪ್ ಯೋಜನೆಗೆ ಬಳಸಲಾಗುತ್ತದೆ. ಶೀಘ್ರದಲ್ಲಿ ಯೋಜನೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಕೋಲಾರ ಜನತೆಗೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ಮಾಜಿ ಸಂಸದ ಕೆ.ಎಚ್. ಮುನಿಯಪ್ಪನವರ ಮಾತಿಗೆ ಯಾರೂ ಕಿವಿಗೊಡುವ ಅಗತ್ಯವಿಲ್ಲ. ಅವರು ಹಿಂದೆ ಕೊಟ್ಟ ಭರವಸೆಗಳೆಲ್ಲವೂ ಪುಸ್ತಕದಲ್ಲಿ ಉಳಿದುಕೊಂಡಿವೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net