ನೀರೆತ್ತುವ ಪಂಪ್‌ಗಿಲ್ಲ ವಿದ್ಯುತ್, ಟ್ಯಾಂಕರ್ ನೀರಿಗೆ ಪೊಲೀಸ್ ಕುಟುಂಬಗಳ ಮೊರೆ

NRD- WATER
ನರಗುಂದ ತಾಲೂಕಿನ ಚಿಕ್ಕನರಗುಂದ ಕ್ರಾಸ್‌ನಲ್ಲಿರುವ ನೀರು ಶುದ್ಧೀಕರಣ ಘಟಕ
Published on

ನರಗುಂದ: ಪಟ್ಟಣದ ಜನರಿಗೆ ನಿರಂತರ ಕುಡಿಯುವ ನೀರು ಪೂರೈಸಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವಿಲುತೀರ್ಥ ಜಲಾಶಯದಿಂದ ನೂರಾರು ಕಿ.ಮೀ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪಟ್ಟಣದ ವರೆಗೂ ಕೈಗೊಳ್ಳಲಾಗಿದೆ. ಆದರೆ, ಜಲಾಶಯದಿಂದ ನೀರೆತ್ತುವ ಪಂಪ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಿಂದ ಪಟ್ಟಣದ ಬಹುತೇಕರು ನೀರಿಗಾಗಿ ಏದುಸಿರು ಬಿಡುವಂತಾಗಿದೆ.

ಸವದತ್ತಿಯ ರೇಣುಕಾ ಸಾಗರ (ನವಿಲುತೀರ್ಥ) ಜಲಾಶಯದಿಂದ ದಿನದ 24 ಗಂಟೆ ನೀರು ಒದಗಿಸುವ 63 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ 2015-16ರಲ್ಲಿ ಚಾಲನೆ ನೀಡಲಾಗಿತ್ತು. 2019ರಲ್ಲಿ ಕುಡಿಯುವ ನೀರಿನ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ. ಆದರೆ, ಅಂದಿನಿಂದ ಇಂದಿನ ವರೆಗೆ ಪಟ್ಟಣದ ಯಾವುದೇ ವಾರ್ಡ್‌ಗಳಲ್ಲಿ ನಿರಂತರ ನೀರು ಹರಿದಿಲ್ಲ. ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದಾಗಿ ಕೆಲವು ವಾರ್ಡ್‌ಗಳಲ್ಲಿ ಮೂರು ದಿನಕ್ಕೊಮ್ಮೆ, ಇನ್ನುಳಿದ ಕಡೆ ವಾರಕ್ಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ಪಟ್ಟಣದ ಜನರು ಕುಡಿಯುವ ನೀರಿಗಾಗಿ ಪುರಸಭೆ ಅಧಿಕಾರಿ, ಸಿಬ್ಬಂದಿಗೆ ಶಾಪ ಹಾಕುವ ಸ್ಥಿತಿಯಿದೆ. ಪಟ್ಟಣದ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಸಿಪಿಐ, ಇಬ್ಬರು ಪಿಎಸ್‌ಐ, ನಾಲ್ವರು ಎಎಸ್‌ಐ ಸೇರಿ ಒಟ್ಟು 44 ಪೊಲೀಸ್ ಪೇದೆಗಳ ಕುಟುಂಬಸ್ಥರು ವಾಸವಾಗಿದ್ದಾರೆ.

ಭಾರಿ ಬಿರುಗಾಳಿಗೆ ತಾಲೂಕಿನ ಚಿಕ್ಕನರಗುಂದ ಕ್ರಾಸ್‌ನಲ್ಲಿರುವ ನೀರು ಶುದ್ಧೀಕರಣ ಘಟಕ ಹಾಗೂ ನವಿಲುತೀರ್ಥ ಜಲಾಶಯದ ಪಂಪ್‌ಹೌಸ್‌ಗಳಿಗೆ ವಿದ್ಯುತ್ ಪೂರೈಕೆ ಮಾಡುವುದು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಅವಘಡ ಸೇರಿ ಸಣ್ಣಪುಟ್ಟ ಸಮಸ್ಯೆ ಸರಿಪಡಿಸುವಲ್ಲಿ ಹೆಸ್ಕಾಂ ಮತ್ತು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣ ವಿಫಲರಾಗುತ್ತಿದ್ದು, ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ನೀರಿನ ಅನಿವಾರ್ಯ ಇರುವ ಕೆಲ ಪೊಲೀಸರು ಹಾಗೂ ನಗರದ ಸಾರ್ವಜನಿಕರು ನೂರಾರು ರೂಪಾಯಿ ಹಣ ಕೊಟ್ಟು ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ.

ತಾಲೂಕಿನ ಆಚಮಟ್ಟಿ ಕ್ರಾಸ್ ಹತ್ತಿರದಲ್ಲಿರುವ ಕುಡಿಯುವ ನೀರಿನ ಜಲ ಸಂಗ್ರಹಾಗಾರದಲ್ಲಿರುವ ವಿದ್ಯುತ್ ಟಿಸಿಗಳು ಆಗಾಗ ಬಂದ್ ಆಗುತ್ತಿವೆ. ಹೆಚ್ಚು ಬಿರುಗಾಳಿ ಇರುವುದರಿಂದ ವಿದ್ಯುತ್ ತಂತಿಗಳು ಅಲ್ಲಲ್ಲಿ ತುಂಡಾಗಿ ಬೀಳುತ್ತಿವೆ. ಇದರಿಂದಾಗಿ ತಿಂಗಳಿನಿಂದ ಪಟ್ಟಣದ ಜನರಿಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ವಿದ್ಯುತ್ ಸಮಸ್ಯೆ ಸರಿಪಡಿಸಿದ ತಕ್ಷಣ ಸಮಸ್ಯೆ ಬಗೆಹರಿಯಲಿದೆ.-ಅಮಿತ್ ತಾರದಾಳೆ, ಪುರಸಭೆ ಮುಖ್ಯಾಧಿಕಾರಿ ವೈರ್‌ಗಳು ಅಲ್ಲಲ್ಲಿ ತುಂಡಾಗಿ ಬೀಳುತ್ತಿವೆ. ಈ ವೇಳೆ ಹೆಸ್ಕಾಂ ಮೇಲಧಿಕಾರಿಗಳ ಸೂಚನೆ ಮೇರೆಗೆ ಕೆಲವೊಮ್ಮೆ ವಿದ್ಯುತ್ ಪೂರೈಕೆಯನ್ನು ನಾವೇ ಸ್ಥಗಿತಗೊಳಿಸಿರುತ್ತೇವೆ. ಜು. 13ರಂದು ಹೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿಯಿಂದ ಜಲಾಗಾರದ ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡು ದುರಸ್ತಿ ಮಾಡಲಾಗುತ್ತಿದೆ.-ಎಚ್.ಎಂ. ಖುದಾವಂದ ಹೆಸ್ಕಾಂ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net