ಬಿಡದಿ ನಾಡ ಕಚೇರಿಯಲ್ಲಿ ವಿದ್ಯುತ್ ಇಲ್ಲ, ಸೇವೆಯೂ ಸಿಕ್ತಿಲ್ಲ

rmgm nada
Published on

ಬಿಡದಿ: ವಿದ್ಯುತ್ ಬಿಲ್ ಪಾವತಿಸದ ಪರಿಣಾಮ ಬಿಡದಿ ನಾಡ ಕಚೇರಿಯ ಅಟಲ್​ಜೀ ಜನಸ್ನೇಹಿ ಕೇಂದ್ರದ ಸೇವೆ ಪಡೆಯಲು ಪರದಾಡುವಂತಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ವಿವಿಧ ಸೇವೆ ಒದಗಿಸಲು ಕೆಎಚ್​ಬಿ ಕಾಲನಿ ರಸ್ತೆಯಲ್ಲಿ ನಾಡ ಕಚೇರಿ ತೆರೆಯಲಾಗಿದೆ. ಈ ಕಚೇರಿ 13 ವೃತ್ತಗಳನ್ನು ಒಳಗೊಂಡಿದ್ದು, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, 10 ತಿಂಗಳಿಂದ ವಿದ್ಯುತ್ ಬಿಲ್ 7 ಸಾವಿರ ರೂ. ಪಾವತಿಸದ ಕಾರಣ ಜನಸ್ನೇಹಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ 36 ವಿವಿಧ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಒಂದು ವಾರದಿಂದ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಸೇವೆ ಸಿಗುತ್ತಿಲ್ಲ ಎಂದು ಕೆಲ ಜನಪ್ರತಿನಿಧಿಗಳು ಮತ್ತು ಮಾಧ್ಯಮದವರು ಬುಧವಾರ ಧ್ವನಿ ಎತ್ತಿದ್ದರಿಂದ ಎರಡು ದಿನಗಳ ಮಟ್ಟಿಗೆ ಬೆಸ್ಕಾಂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ವಿದ್ಯುತ್ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಮತ್ತೆ ಕಡಿತಗೊಳ್ಳಲಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ವಿದ್ಯುತ್ ಬಿಲ್ ಪಾವತಿಸಿ, ಸಾರ್ವಜನಿಕರಿಗೆ ಸೇವೆ ಒದಗಿಸಲು ಮುಂದಾಗಬೇಕಿದೆ.

ಬಿಡದಿ ನಾಡಕಚೇರಿ ಖಾಸಗಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಧಿಕಾರಿಗಳೇ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಕರೊನಾ ಸಮಯದಲ್ಲಿ ಅಲಾಟ್​ವೆುಂಟ್ ಇಲ್ಲದೆ ಬಿಲ್ ಪಾವತಿ ಮಾಡಿರಲಿಲ್ಲ. ಕೂಡಲೇ ವಿದ್ಯುತ್ ಬಿಲ್ ಪಾವತಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು. | ಬಿ.ಸಿ.ಮಂಜುನಾಥ್ ಉಪತಹಸೀಲ್ದಾರ್, ಬಿಡದಿ ನಾಡ ಕಚೇರಿ ಆದಾಯ ಪ್ರಮಾಣಪತ್ರ ಪಡೆಯಲು ಬಿಡದಿ ನಾಡ ಕಚೇರಿಗೆ ಬಂದಿದ್ದೆ. ಕರೆಂಟ್ ಇಲ್ಲದ ಸಮಸ್ಯೆ ತಿಳಿದು ಕಾದುಕುಳಿತು ಬರಿಗೈಲಿ ಊರಿಗೆ ವಾಪಸ್ಸಾದೆ. | ವೃಂದಾ ವಿದ್ಯಾರ್ಥಿನಿ, ಗಾಣಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net