ಖೊಟ್ಟಿ ಕೊಳವೆಬಾವಿಗೆ ಇಲ್ಲ ವಿದ್ಯುತ್

27.05.2024 SDLP 03
ಕೊರೆಯದ ಕೊಳವೆಬಾವಿಗೆ ಬೆಸ್ಕಾಂ ನವರು ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದ ಘಟನೆ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲ್ಲಕಿನ ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿ ಕೊರೆಸಿದ್ದ ಎನ್ನಲಾದ ಕೊಳವೆಬಾವಿ ಸ್ಥಳಕ್ಕೆದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಾನಂದ, ಹಾಗೂ ಬೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿ ಕೊಳವೆಬಾವಿಯ ಆಳ ಪರಿಶೀಲಿಸಿದರು.
Published on

ದೇವರಾಜು ಅರಸು ನಿಗಮ ವ್ಯವಸ್ಥಾಪಕರಿಂದ ತಡೆ- ಕೇಸಿಂಗ್‌ಪೈಪ್ ಅಳವಡಿಸಿ ಹಣ ಲಪಟಾಯಿಸಿರುವುದು ಬೆಳಕಿಗೆ

ಶಿಡ್ಲಘಟ್ಟ: ಇಲ್ಲದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯಕ್ಕೆ ತಡೆ ಬಿದ್ದಿದೆ. ಕೊಳವೆಬಾವಿ ಕೊರೆದಿರುವುದೇ ಖೊಟ್ಟಿ ಎಂದು ತಪಾಸಣೆ ವೇಳೆ ತಿಳಿದುಬಂದಿದೆ.
ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ತಿಮ್ಮನಾಯಕನಹಳ್ಳಿಯಲ್ಲಿ ರೈತರೊಬ್ಬರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿದ್ದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡದಂತೆ ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಡೆಹಿಡಿದಿದ್ದಾರೆ.
ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿ ಎಂಬುವವರಿಗೆ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರಾಗಿತ್ತು. ಕೊಳವೆಬಾವಿಯನ್ನು ಕೊರೆಸದೆ ಹತ್ತು ಅಡಿ ಆಳಕ್ಕೆ ಕೇಸಿಂಗ್ ಪೈಪ್ ಇಳಿಸಿ ಸುತ್ತಲೂ ಮಣ್ಣು ರಾಶಿ ಹಾಕಿ ಕೊಳವೆಬಾವಿಯಂತೆ ಬಿಂಬಿಸಲಾಗಿತ್ತು. ಇಲ್ಲದ ಕೊಳವೆಬಾವಿಗೆ ಬೆಸ್ಕಾಂನವರು ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದ್ದರು. ಅನುಮಾನಗೊಂಡ ಗ್ರಾಮಸ್ಥರು ಸಂಬಂಧಿಸಿದ ಇಲಾಖೆಯವರಿಗೆ ಮೌಖಿಕವಾಗಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ದೇವರಾಜು ಅರಸು ಅಭಿವದ್ಧಿ ನಿಗಮದ ವ್ಯವಸ್ಥಾಪಕ ಶಿವಾನಂದ, ಬೆಸ್ಕಾಂ ಅಧಿಕಾರಿಗಳು, ಗಂಗಾ ಕಲ್ಯಾಣ ಯೋಜನೆಯಡಿ ನಾರಾಯಣಸ್ವಾಮಿ ಅವರು ಕೊರೆಸಿದ್ದ ಕೊಳವೆಬಾವಿಯ ಆಳವನ್ನು ಪರಿಶೀಲಿಸಿದ್ದಾರೆ.

ಅವಾಕ್ಕಾದ ಅಧಿಕಾರಿಗಳು
ಪರಿಶೀಲನೆ ವೇಳೆ ಕೇವಲ ಎಂಟು ಅಡಿಯಷ್ಟು ಆಳಕ್ಕೆ ರಂಧ್ರ ಮಾಡಿ 10 ಅಡಿ ಕೇಸಿಂಗ್ ಪೈಪ್ ಅಳವಡಿಸಿದ್ದು ಕಂಡುಬಂದಿದೆ. ಇದನ್ನು ನೋಡಿದ ಅಧಿಕಾರಿಗಳು ಅವಾಕ್ಕಾಗಿದ್ದಾರೆ. ಇದರಿಂದ ಕೊಳವೆಬಾವಿ ಕೊರೆಸದೆ ಸುಳ್ಳು ದಾಖಲೆ ಸೃಷ್ಟಿಸಿ ಡ್ರಿಲ್ಲಿಂಗ್‌ನ ಹಣ ಲಪಟಾಯಿಸಿದ ರೈತ, ಡ್ರಿಲ್ಲಿಂಗ್ ಮಾಡಿದ ಬೋರ್‌ವೆಲ್ ಏಜೆನ್ಸಿಯ ಪಿತೂರಿ ಬಯಲಾಗಿದೆ.

2022ರಲ್ಲಿ ಕೊಳವೆಬಾವಿ ಮಂಜೂರು
2017-18ನೇ ಸಾಲಿನಲ್ಲಿ ರೈತ ನಾರಾಯಣಸ್ವಾಮಿ ಅವರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗೆ ಅರ್ಜಿ ಸಲ್ಲಿಸಿದ್ದು, 2022ರಲ್ಲಿ ಕೊಳವೆಬಾವಿ ಮಂಜೂರಾಗಿತ್ತು. ಸುಮಾರು 3.5 ಲಕ್ಷ ರೂ. ಘಟಕ ವೆಚ್ಚದ ಈ ಯೋಜನೆಯಡಿ ಕೊಳವೆಬಾವಿ ಕೊರೆಸಿ ನೀರು ದೊರೆತರೆ ಪಂಪ್ ಮೋಟಾರು ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net