

ಮೈಸೂರು: ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ. ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೊಳವೆಬಾವಿಗಳಲ್ಲಿ ಉತ್ತಮ ನೀರು ಇದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಸಮಸ್ಯೆ ಕಂಡುಬಂದರೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಹೇಳಿದರು.
ಬರ ಪರಿಹಾರ ಪಡೆಯಲು ಫ್ರೂಟ್ಸ್ ಐಡಿ ಅತ್ಯವಶ್ಯಕವಾಗಿದೆ. ಹಾಗಾಗಿ ಕೃಷಿ ಇಲಾಖೆಯಿಂದ ರೈತರಿಗೆ ಫ್ರೂಟ್ಸ್ ಐಡಿ ಕ್ರಿಯೇಟ್ ಮಾಡಲಾಗುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಭತ್ತ ವನ್ನು ಖರೀದಿ ಮಾಡಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯ 20 ಸಾವಿರ ರೈತರು ನೋಂದಣಿ ಆಗಿದ್ದಾರೆ ಎಂದು ವಿವರಿಸಿದರು.
ಚಿಕಿತ್ಸೆಗೆ ಬದ್ಧರಾಗಿ:
ಯುನಾನಿ, ಆಯುರ್ವೇದಿಕ್ ಚಿಕಿತ್ಸೆ ನೀಡಲು ವಿದ್ಯಾಭ್ಯಾಸ ಮಾಡಿರುವವರು ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನು ಮಾತ್ರ ನೀಡಲು ಬದ್ಧರಾಗಿರಬೇಕು. ಅಲೋಪಥಿ ವೈದ್ಯ ಪದ್ಧತಿಯ ಚಿಕಿತ್ಸೆ ನೀಡುವುದು ಅಪರಾಧ. ಈ ಬಗ್ಗೆ ಪರಿಶೀಲನೆ ನಡೆಸಲು ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಪಿಎಂಇ ಆಕ್ಟ್ ಅಡಿ ಹಲವು ಕ್ಲಿನಿಕ್‌ಗಳು (ಅನುಮತಿ ಪಡೆಯದೇ) ನಡೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಹೇಳಿದರು.
ಕೋವಿಡ್ ಪರೀಕ್ಷೆ :
ಕೋವಿಡ್-19 ಕುರಿತು ದಿನನಿತ್ಯ ಟೆಸ್ಟಿಂಗ್‌ಗಳು ನಡೆಯುತ್ತಿದೆ. ಕೋವಿಡ್ ಪಾಸಿಟಿವ್ ಕಂಡುಬಂದರೆ ಚಿಕಿತ್ಸೆ ನೀಡಿ 7 ದಿನ ಐಸೋಲೇಶನ್ ಮಾಡಲಾಗುತ್ತಿದೆ. ಮುಂದೆ ಕೋವಿಡ್ ಹೆಚ್ಚಾದರೆ ಅಗತ್ಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್ಸೆಸ್ಸೆಲ್ಸಿ ಮಕ್ಕಳು ಶೇ. 100 ರಷ್ಟು ಉತ್ತೀರ್ಣರಾಗಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ರೀಡಿಂಗ್ ರೂಂಗಳನ್ನು ತೆರೆಯುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಜಿಪಂ ಸಿಇಒ ಗಾಯತ್ರಿ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಒಟ್ಟು 37 ಲಕ್ಷ ರೂ.ಗಳ 9 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿಗಳ ಮತ್ತು ಗ್ರಂಥಾಲಯಗಳ ರಿಪೇರಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಪರ್ಕ ರಸ್ತೆಗಳು, ಶಾಲಾ ಕಾಂಪೌಂಡ್ ನಿರ್ಮಾಣ, ಡಿಜಿಟಲ್ ಲೈಬ್ರರಿಗಳ ನಿರ್ಮಾಣ, ಹಾಸ್ಟೆಲ್ ಮತ್ತು ಅಂಗನವಾಡಿ ಕಟ್ಟಡಗಳ ರಿಪೇರಿ ಕೈಗೊಳ್ಳಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಮುಂದಿನ ವರ್ಷದ ಗುರಿ:
ಜಿಪಂ ಉಪ ಕಾರ್ಯದರ್ಶಿ ಕೃಷ್ಣಂರಾಜು ಮಾತನಾಡಿ, ಹಸರೀಕರಣ ಕಾಮಗಾರಿಗಳು, ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ, ಘನ ತ್ಯಾಜ್ಯ ವಿಲೇವಾರಿ ಘಟಕ ಗಳ ನಿರ್ಮಾಣ, ಅಂಗನವಾಡಿ ಕಟ್ಟಡಗಳು, ಚರಂಡಿ, ಸ್ಮಶಾನಗಳ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಜಿಲ್ಲೆಯಲ್ಲಿ 9,000 ಸಾವಿರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಮುಂದಿನ ವರ್ಷ 25 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿ, ತೆಂಗು ಮಾವು ಬಾಳೆ ಬೆಳೆಗಳಿಗೆ (ನರೇಗಾ ಯೋಜನೆಯಡಿ )ಉತ್ತೇಜನ ನೀಡಲು ಸಸಿಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.