ಭಾರತ ವಿಶ್ವದ ನಂ.1 ದೇಶವಾಗುವುದರಲ್ಲಿ ಸಂದೇಹವಿಲ್ಲ; ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ವಿಶ್ವಾಸ

isro
Published on

ಬೆಂಗಳೂರು: ಭಾರತ ಸ್ವತಂತ್ರಗೊಂಡು 2047ರ ಹೊತ್ತಿಗೆ ಒಂದು ನೂರು ವರ್ಷಗಳಾಗಲಿದ್ದು, ವಿಶ್ವದ ನಂ.1 ಸ್ಥಾನ ಪಡೆಯುವ ಗುರಿ ಇರಿಸಿಕೊಂಡಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಇಸ್ರೋ ಮಾಜಿ ಅಧ್ಯಕ್ಷ ಪದ್ಮಶ್ರೀ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.

ಭಾರತೀಯ ವಿದ್ಯಾಭವನ ಆಯೋಜಿಸಿದ್ದ ಇಸ್ರೋ ವಿಜ್ಞಾನಿ ಪಿ.ರೋತ್ತಮ್ ರಾವ್ ಬರೆದ ಮಕ್ಕಳ ಜ್ಞಾನ ಪುಸ್ತಕಗಳಾದ ಭೂಮಿ, ಆಕಾಶ ಮತ್ತು ಬಾಹ್ಯಾಕಾಶ ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಭಾರತ ಜಗತ್ತಿನಲ್ಲೇ ವಿಶಿಷ್ಟ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ರಾಷ್ಟ್ರ. ವಸುದೈವ ಕುಟುಂಬಕಂ ಎಂಬ ವಿಶಾಲ ತತ್ವಗಳ ಅಡಿಯಲ್ಲಿ ನಡೆಯುತ್ತಿದೆ. ನೂರಾರು ವರ್ಷಗಳ ಪರಕೀಯ ಆಡಳಿತದಿಂದ ಸ್ವತಂತ್ರಗೊಂಡು 2047ಕ್ಕೆ ನೂರು ವರ್ಷವಾಗಲಿದ್ದು, ಆ ವೇಳೆಗೆ ವಿಶ್ವದ ನಂ.1 ಸ್ಥಾನಕ್ಕೆ ತಲುಪಬೇಕೆಂಬ ಗುರಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ. ಹಿರಿಯರು ತಮ್ಮ ಜ್ಞಾನವನ್ನು ಬರಹ, ಭಾಷಣ ಇತ್ಯಾದಿ ಮಾರ್ಗದಿಂದ ಹೊಸ ಪೀಳಿಗೆಗೆ ತಿಳಿಸಬೇಕು. ಅದರಿಂದ ಪ್ರೇರಣೆಗೊಂಡ ನವಪೀಳಿಗೆ ಮತ್ತಷ್ಟು ಹೊಸ ಸಾಧನೆಗಳನ್ನು ಮಾಡಬೇಕು. ಭಾರತವು ಜಾಗತಿಕವಾಗಿ ಬ್ಯಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಮನುಷ್ಯ ಪ್ರತಿಯೊಂದನ್ನು ಈ ಪ್ರಕೃತಿಯಿಂದ ಕಲಿತಿದ್ದಾನೆ. ಪ್ರಕೃತಿಯಲ್ಲಿರುವ ಆವಿಷ್ಕಾರಗಳಿಂದ ಪ್ರೇರಣೆಗೊಂಡು ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಲೇ ಬಂದಿದಾನೆ. ಆದರೆ ಮನುಷ್ಯ ತಾನೊಬ್ಬನೇ ಈ ಪ್ರಕೃತಿಯಲ್ಲಿ ಜೀವಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿರುವ ಇತರೆ ಜೀವಿಗಳಿಗೆ ಹಾನಿಯಾಗದಂತೆ, ಪ್ರಕೃತಿಯನ್ನು ಹಾಳು ಮಾಡದ ಹಾಗೆ ತನ್ನ ಸಂಶೋಧನೆಗಳನ್ನು ಮುಂದುವರೆಸಿ ಇನ್ನಷ್ಟು ಸಾಧನೆ ಮಾಡಬೇಕು. ಅದರಿಂದ ಜೀವರಾಶಿ ಸಾವಿರಾರು ತಲೆಮಾರುಗಳ ವರೆಗೆ ಜೀವಿಸಲು ಸಾಧ್ಯ ಎಂದರು.

ಸಮಾರಂಭದಲ್ಲಿ ಎಚ್‌ಎಎಲ್ ಮಾಜಿ ಅಧ್ಯಕ್ಷ ಡಾ.ಸಿ.ಜಿ.ಕೃಷ್ಣದಾಸ್ ನಾಯರ್, ಲೇಖಕ ಪಿ.ರೋತ್ತಮ ರಾವ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net