ಶಿರೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ

byn (3)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ಜಿಲ್ಲೆಯಲ್ಲಿ 44 ಸದಸ್ಯ ಬಲದ ಅತೀ ದೊಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಂದಿರುವ ಶಿರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಪ್ರತಿದಿನ ಇಲ್ಲಿಗೆ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂದು ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಾರ್ವಜನಿಕರೂ ಧನಿಗೂಡಿಸಿದರು. ಇದು ಶಿರೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಸದಸ್ಯರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳಲ್ಲಿ ಹೆಚ್ಚಿನ ಮಂದಿ ಗ್ರಾಮಸಭೆಗೆ ಗೈರಾಗಿದ್ದರು. ಈ ಬಗ್ಗೆಯೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. 22 ಅಧಿಕಾರಿಗಳಲ್ಲಿ ಕೇವಲ 10 ಜನ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ. ಹೀಗಾಗಿ ಸಭೆಗೆ ಬಾರದ ಅಧಿಕಾರಿಗಳ ನಡೆಯನ್ನು ಗ್ರಾಮ ಪಂಚಾಯಿತಿ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಶಿರೂರು ಗ್ರಾಮದ ನೀರ‌್ಗದ್ದೆ ಬಳಿ ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, ಈಗ ಸರ್ಕಾರದಿಂದ ಜಾಗ ಮಂಜೂರಾಗಿದೆ. ಆದರೆ ಇಲಾಖೆ ಈವರೆಗೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಗ್ರಾಪಂ ಸದಸ್ಯ ಉದಯ ಪೂಜಾರಿ ಮೈದಿನಪುರ ಆಗ್ರಹಿಸಿದರು. ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್, ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಶೆಟ್ಟಿ, ನೋಡಲ್ ಅಧಿಕಾರಿ ಗಾಯತ್ರಿದೇವಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಮಿಕ್ತಾ ನಾಯ್ಕ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿ ಶಂಕರ ಬಿಲ್ಲವ ನಿರ್ವಹಿಸಿದರು.

ವಿದ್ಯುತ್ ಕಣ್ಣುಮುಚ್ಚಾಲೆ

ಸಣ್ಣ ವಿದ್ಯುತ್ ಕಂಬ ಬಿದ್ದರೂ ಮೂರು ದಿನ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಶಿರೂರು ಭಾಗದಲ್ಲಿ ಪ್ರತಿದಿನ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತದೆ. ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ಮೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿಗೆ ಪಂಚಾಯಿತಿ ಸದಸ್ಯರಾದ ಮುಕ್ರಿ ಅಲ್ತಾಫ್, ಮಹ್ಮದ್ ಗೌಸ್, ಗಣಪತಿ ಗಾಣಿಗ, ಯಾಶೀನ್ ಕೆಸರಕೋಡಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net