

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರ ವಂಶವಾಹಿನಿಯಲ್ಲಿ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಎಂಬುದಿಲ್ಲ. ಮೊದಲಿನಿಂದಲೂ ಪ್ರಜಾಪ್ರಭುತ್ವ ವಿರೋಧಿ, ಖದೀಮರು, ಕಳ್ಳರು, ನಾಲಾಯಕರು. ಇಂಥವರನ್ನು ಬುತ್ತಿಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಛೇಡಿಸಿದರು.
ಹು-ಧಾ ಮಹಾನಗರ ಮಹಿಳಾ ಬಿಜೆಪಿ ಮೋರ್ಚಾ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಮಾಕ್ ಪಾರ್ಲಿಮೆಂಟ್ ಸೆಷನ್ ಹಾಗೂ ದೇಶದ ತುರ್ತು ಪರಿಸ್ಥಿತಿಯ ಕರಾಳ ದಿನದ ಚರ್ಚೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಸ್ವಾರ್ಥ, ಅಧಿಕಾರದ ದುರಾಸೆ ಹಾಗೂ ಪ್ರಜಾ ವಿರೋಧಿ ಆಡಳಿತ ನಡೆಸಿದ ಪ್ರಧಾನಿ ದಿ. ಇಂದಿರಾ ಗಾಂಧಿಯವರು, ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ವ್ಯವಸ್ಥೆಗೆ ಧ್ವನಿ ಎತ್ತುವ ಹೋರಾಟಗಾರರನ್ನು ಬಂಧಿಸಿ, ಜೈಲಿಗಟ್ಟಿದರು ಎಂದು ಟೀಕಿಸಿದರು.
ತುರ್ತು ಪರಿಸ್ಥಿತಿ ವೇಳೆ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿದ್ದರು. ಇಂಥ ನಾಯಕಿಯನ್ನು ಹೊಂದಿದ್ದ ಕಾಂಗ್ರೆಸ್‌ನವರು ನೆಪಕ್ಕೆ ಸಂವಿಧಾನ ಪ್ರತಿ ಮಾದರಿಯ ಹಾಳೆ ಇಟ್ಟುಕೊಂಡು ಪಾಠ ಮಾಡಲು ಹೊರಟಿದ್ದಾರೆ. ಢೋಂಗಿತನವನ್ನು ಪ್ರದರ್ಶಿಸುತ್ತಿದ್ದಾರೆ. ದೇಶದ ಆಡಳಿತದ ಇತಿಹಾಸ ತಿರುವಿ ನೋಡಿದಾಗ, ಯಾರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 10 ವರ್ಷದಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಜತೆಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ವ್ಯವಸ್ಥೆ ಕಾಪಾಡಿಕೊಂಡು ಬರುತ್ತಿದೆ. ದೇಶದ ಸಮಗ್ರ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಇಡೀ ವಿಶ್ವಕ್ಕೆ ಮಾದರಿ ಎಂಬಂತೆ ನಾಯಕತ್ವ ಪ್ರದರ್ಶಿಸುತ್ತಿದೆ ಎಂದರು.
ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ಶಾ ಅವರು, 2028ರೊಳಗೆ ನಕ್ಸಲ್ ಮುಕ್ತ ಭಾರತ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಗಳನ್ನು ಪಾಲಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕನಕದಾಸ ಕಾಲೇಜ್ ಉಪನ್ಯಾಸಕ ಬೀರಪ್ಪ ತಿರಕಪ್ಪನವರ ನಿರ್ದೇಶನದಲ್ಲಿ ಎಬಿವಿಪಿ ಕಾರ್ಯಕರ್ತರು ಹಾಗೂ ಕಾಲೇಜ್ ವಿದ್ಯಾರ್ಥಿಗಳಿಂದ ಮಾಕ್ ಪಾರ್ಲಿಮೆಂಟ್ ಸೆಷನ್ ಕಾರ್ಯಕ್ರಮ ನಡೆಯಿತು. ಅದರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿ ಕುರಿತು ಹಾಲಿ ಮೋದಿ ಸರ್ಕಾರ ಹಾಗೂ ಪ್ರತಿಪಕ್ಷಗಳ ಕಲ್ಪಿತ ಚರ್ಚೆಗಳು ನಡೆದವು.
ಶಾಸಕ ಮಹೇಶ ಟೆಂಗಿನಕಾಯಿ, ನೂತನ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್‌ಸಂತೋಷ ಚವ್ಹಾಣ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ, ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ಮಾಜಿ ಮೇಯರ್ ರಾಮಪ್ಪ ಬಡಿಗೇರ, ರವಿ ದಂಡಿನ, ಶೋಭಾ ನಿಸ್ಸೀಮಗೌಡ್ರ, ಶಾಂಭವಿ ಅಶ್ವಥಪೂರ ಇದ್ದರು.