ಮನೆ, ಬೆಳೆ ಪರಿಹಾರ ವಿತರಣೆ ವಿಳಂಬ ಸಲ್ಲದು: ಸಿಎಂ ಬಸವರಾಜ ಬೊಮ್ಮಾಯಿ ಖಡಕ್​ ಸೂಚನೆ

Bommai
Published on

ಬೆಂಗಳೂರು: ಭಾರಿ ಮಳೆ, ಪ್ರವಾಹದಿಂದ ಬಾಧಿತ ಸಂತ್ರಸ್ತರಿಗೆ ಮನೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬ ಸಲ್ಲದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್​ ಸೂಚನೆ ನೀಡಿದ್ದಾರೆ. ಭಾರಿ ಮಳೆಯಿಂದ ಹಾನಿಗೆ ಒಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಜತೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ಭಾನುವಾರ ನಡೆಸಿದರು.

ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲೂ ಹಣವಿದೆ. ಅಲ್ಲದೆ, ತುರ್ತು ಹಾಗೂ ತಾತ್ಕಾಲಿಕ ಕೆಲಸಗಳಿಗೆ ಬಿಡುಗಡೆ ಹಣ ಬಳಸಿಕೊಂಡು ಮನೆ ಹಾಗೂ ಬೆಳೆ ಹಾನಿಗೆ ತಕ್ಷಣವೇ ಪರಿಹಾರ ವಿತರಿಸಿ, ಬಾಧಿತರ ಕಷ್ಟಗಳಿಗೆ ಯುದ್ಧೋಪಾದಿಯಲ್ಲಿ ಸ್ಪಂದಿಸಬೇಕು ಎಂದರು. ಕೆರೆಗಳು ತುಂಬಿರುವ ಕಾರಣ ಬಿರುಕು ಉಂಟಾಗದಂತೆ ನಿಗಾವಹಿಸಬೇಕು. ಅದರಲ್ಲೂ ದೊಡ್ಡ ಕೆರೆಗಳಿರುವೆಡೆ ಎಚ್ಚರಿಕೆವಹಿಸಿ ಯಾವುದೇ ಸಾವು& ನೋವಾಗದಂತೆ ನೋಡಿಕೊಳ್ಳಬೇಕು. ತುಂಬಿದ ಕೆರೆಗಳ ಸಮೀೆ ಕೈಗೆತ್ತಿಕೊಂಡು ಅಗತ್ಯವಿರುವೆಡೆ ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.

ಸಚಿವರಿಂದಲೂ ಮಾಹಿತಿ:

ಆಯಾ ಡಿಸಿಗಳು ವಸ್ತುಸ್ಥಿತಿ ವಿವರಿಸಿದರು. ಹಾಜರಿದ್ದ ಸಚಿವರಾದ ಎಸ್​.ಟಿ. ಸೋಮಶೇಖರ್​, ಡಾ.ಸಿ. ಎನ್​.ಅಶ್ವತ್ಥ ನಾರಾಯಣ ಹಾಗೂ ಉಮೇಶ್​ ಕತ್ತಿ ಹಾನಿ ಬಗ್ಗೆ ಮಾಹಿತಿ ನೀಡಿದರು. ತುರ್ತು ಕಾಮಗಾರಿ ನಿರ್ವಹಣೆಗೆ ಅನುದಾನ ಬಿಡುಗಡೆಯಾಗಿದ್ದು, ದೀರ್ಘಾವಧಿ ಪರಿಹಾರ ಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಸಿಎಂ ಬೊಮ್ಮಾಯಿಗೆ ಕೋರಿದರು ಎನ್ನಲಾಗಿದೆ.

ಪರ್ಯಾಯ ವ್ಯವಸ್ಥೆ: ಮಳೆಯಿಂದಾಗಿ ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ವಾಹನದಟ್ಟಣೆ ಮಾರ್ಗಯಿದಾಗಿದ್ದು, ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಅಗತ್ಯವಿದೆ. ಈ ಸಮಸ್ಯೆಗೆ ಪರಿಹಾರವಾಗಿ ಭಾನುವಾರದಿಂದಲೇ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಬೇಕು. ಮೈಸೂರು, ರಾಮನಗರ ಮತ್ತು ಮಂಡ್ಯ ಎಸ್​ಪಿ ಜಂಟಿಯಾಗಿ ಈ ಹೊಣೆ ನಿರ್ವಹಿಸಬೇಕು ಎಂದು ಸಿಎಂ ಸೂಚಿಸಿದರು.

ಮಳೆಯಿಂದ ಜಿಲ್ಲೆಗಳಲ್ಲಿ ಸಂಭವಿಸಿರುವ ಮನೆಗೆ ತಕ್ಷಣ ಪರಿಹಾರ ಒದಗಿಸಬೇಕು. ಬೆಳೆ ಹಾನಿಯ ನಿಖರ ಮಾಹಿತಿ ಪಡೆಯಬೇಕು. ರಸ್ತೆ ಹಾನಿಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದರೆ ಬದಲೀ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. | ಬಸವರಾಜ ಬೊಮ್ಮಾಯಿ ಸಿಎಂ

ಪ್ರಮುಖಾಂಶಗಳು * ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ಉತ್ತಮ ಗುಣಮಟ್ಟದ ಆಹಾರ, ಬಂಧುಗಳ ಮನೆಗೆ ತೆರಳಲಿರುವ ಸಂತ್ರಸ್ತರಿಗೆ ಆಹಾರ ಕಿಟ್​ಗಳನ್ನು ತಲುಪಿಸಬೇಕು

* ಕಂಬಗಳು ಬಿದ್ದು, ತಂತಿಗಳು ತುಂಡಾಗಿ ವಿದ್ಯುತ್​ ಪೂರೈಕೆ ಕಡಿತವಾದ ಪ್ರದೇಶದಲ್ಲಿ ಸಕಾಲಕ್ಕೆ ವಿದ್ಯುತ್​ ಸಂಪರ್ಕ ಮರು ಸ್ಥಾಪಿಸಬೇಕು

* ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆಗಳು ಸಮನ್ವಯದಿಂದ ರಸ್ತೆ ದುರಸ್ತಿ ಕೈಗೊಳ್ಳಬೇಕು

* ರಸ್ತೆ ಮತ್ತು ಸೇತುವೆಗಳ ತುರ್ತು ದುರಸ್ತಿ ವಿಷಯದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಮಧ್ಯೆ ಉತ್ತಮ ಸಂಪರ್ಕ, ಸಂವಹನ ಇರಬೇಕು

ತೋಟ, ಜಮೀನುಗಳು ಜಲಾವೃತ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನಾದ್ಯಂತ ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ರಸ್ತೆಗಳು ಕೊಚ್ಚಿಹೋದರೆ, ಹಳ್ಳ&ಕೊಳ್ಳಗಳಲ್ಲಿ ನುಗ್ಗಿದ ನೀರು ತೋಟ ಹಾಗೂ ಕೃಷಿ ಜಮೀನುಗಳನ್ನು ಆವರಿಸಿಕೊಂಡಿದೆ. ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆ ತಾಲೂಕು ಸಂತೇಬಾಚಹಳ್ಳಿ ಹೋಬಳಿಯ ಅಲಯ ಕೆರೆ ಕೋಡಿಯ ನೀರು ಹರಿಯುವ ಹಳ್ಳ ಒಡೆದು ನೂರಾರು ಎಕರೆ ಜಮೀನು ಜಲಾವೃತಗೊಂಡು ಬೆಳೆ ನೀರು ಪಾಲಾಗಿವೆ. ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಎರಡು ದಿನದಿಂದ ಸುರಿದ ಧಾರಾಕಾರ

ಮಳೆ ಪರಿಣಾಮ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದ

ಬಳಿ 9ಎ ಕಾಲುವೆ ಒಡೆದು, ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.

ಅವಡಕ್ಕೆ ಮೂವರು ಬಲಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿತ ಅವಡಗಳಿಗೆ ಮೂವರು ಬಲಿಯಾಗಿದ್ದಾರೆ. ಬಳ್ಳಾರಿಯ ಬಂಡಿಹಟ್ಟಿಯಲ್ಲಿ ಮನೆ ಮಾಳಿಗೆ ಮೇಲೆ ನಿಂತಿದ್ದ ಮಳೆ ನೀರು ಹೊರ ಹಾಕುತ್ತಿರುವಾಗ ಕಂಬದಿಂದ ಬಂದಿದ್ದ ಸರ್ವೀಸ್​ ವೈರ್​ ತಾಕಿ ರಾಜ್ಯೋತ್ಸವ ಪ್ರಶಸ್ತಿ ಪುರಸತ, ಬಯಲಾಟ ಕಲಾವಿದ ಸಾರಥಿ ಪಂಪಾಪತಿ (68) ಮತ್ತು ಅವರ ಪತ್ನಿ ದ್ಯಾಮವ್ವ (66) ಮೃತಪಟ್ಟಿದ್ದಾರೆ. ಪಂಪಾಪತಿ, ಎರಡು ಸಾವಿರಕ್ಕೂ ಹೆಚ್ಚು ಬಯಲಾಟ ಪ್ರದರ್ಶನ ನೀಡಿದ್ದರು. 2018ರಲ್ಲಿ ರಾಜ್ಯ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಕೆರೆ ಕೋಡಿ ಬಿದ್ದು ಶನಿವಾರ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮಾವಿನಹಳ್ಳಿ ನಿವಾಸಿ ಮಹೇಶ್​ (45) ಮೃತರು.

ಇನ್ನೂ ನಾಲ್ಕು ದಿನ ಮಳೆ: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಒಂದೇ ರಾತ್ರಿಗೆ ಬಿದ್ದ ಆಲಿಕಲ್ಲು ಮಳೆಗೆ ವಿಜಯಪುರದಲ್ಲಿ 200 ಕೋಟಿ ರೂ. ನಷ್ಟವಾಗಿದೆ. ಉಡುಪಿ, ದಣ ಕನ್ನಡ, ಉತ್ತರ ಕನ್ನಡದಲ್ಲಿ ಆ.29ರಿಂದ ಸೆ.1ರವರೆಗೆ ಹಾಗೂ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಆ.29ರಿಂದ ಮುಂದಿನ ಮೂರು ದಿನವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ನೀಡಿದೆ. ಕಲಬುರಗಿ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಮೈಸೂರು, ಬೆಂಗಳೂರಿನಲ್ಲಿ ಆ.29ರಂದು ಹಾಗೂ ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಆ.30ರಂದು ಯೆಲ್ಲೋ ಅರ್ಲಟ್​ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net