ಗುಂಡ್ಲುಪೇಟೆ: ಜನರ ಅವಶ್ಯಕತೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ಮಂಗಳವಾರ 40 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಾಲೂಕಿನ ಆಯ್ದ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗಾಗಲೇ ತಾಲೂಕಿನ 62 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸದ್ಯ 12 ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಉಳಿದ ಗ್ರಾಮಗಳಲ್ಲಿಯೂ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಬಗರ್‌ಹುಕುಂ ಸಮಿತಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಎಪಿಎಂಸಿ ನಿರ್ದೇಶಕ ಮೃತ್ಯುಂಜಯಪ್ಪ, ಮಲೆ ಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಳಿ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ರಾಜೇಂದ್ರ ಸ್ವಾಮೀಜಿ, ಮುಖಂಡರಾದ ಬಿ.ಕೆ.ಶಿವಪ್ಪ, ಕೆ.ಎನ್.ಮಾದಪ್ಪ, ಕೆ.ಪಿ.ರಾಜಪ್ಪ, ಶಿವನಂಜಪ್ಪ, ಮಾದೇಶ, ನಂದೀಶ ಇತರರು ಇದ್ದರು.
ಬಸ್ನ್ ನಿಯೋಜಿಸಲು ಕ್ರಮ: ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕರೊನಾ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯು ಹಲವಾರು ಮಾರ್ಗಗಳಲ್ಲಿ ಬಸ್ ನಿಲುಗಡೆ ಮಾಡಿದ್ದು ಇನ್ನೂ ಚಾಲನೆಗೆ ಬಂದಿಲ್ಲ. ಸುಮಾರು 30ಕ್ಕೂ ಹೆಚ್ಚು ಬಸ್‌ಗಳ ಸಂಚಾರವನ್ನು ಆರಂಭಿಸಬೇಕಾಗಿದೆ. ಗ್ರಾಮದ ಮಾರ್ಗವಾಗಿ ಬಸ್‌ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.