

ಬಾಳೆಹೊನ್ನೂರು: ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಮುಖ್ಯ. ಸನ್ಮಾರ್ಗದಲ್ಲಿ ನಡೆಯುವ ಛಲ ಇರಬೇಕು. ಬದುಕು ಬಲಗೊಳ್ಳಲು ನಮ್ಮ ನಿರ್ಧಾರ ನಡೆ ಗಟ್ಟಿಯಾಗಿರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಕಾಲು ಜಾರುವುದರಿಂದ ಆಗುವ ಅನಾಹುತಕ್ಕಿಂತ ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು. ಆಡುವ ಮಾತಿನ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಮನುಷ್ಯನಾಗಿ ಬಾಳುವುದು ಸುಲಭ. ಆದರೆ ಮಾನವೀಯತೆಯಿಂದ ನಡೆಯುವುದು ತುಂಬಾ ಕಷ್ಟ. ಉತ್ತಮ ಚಿಂತನೆಗಳು ನಮಗಷ್ಟೇ ಅಲ್ಲ ಪರರ ಬದುಕಿಗೂ ಬೆಳಕಾಗಬಲ್ಲವು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಪರಿಶುದ್ಧವಾಗಿರಬೇಕು. ಸಂಪತ್ತು ಬಂದಾಗ ಸ್ನೇಹ ಮರೆಯಬಾರದು ಎಂದರು.
ವಿದ್ಯೆ ಕಲಿತ ನಂತರ ಗುರು ಋಣ ಮರಿಬಾರದು. ಸಮಾಜದಲ್ಲಿ ಗೌರವ, ಘನತೆ ದೊರಕಿದ ಸಂದರ್ಭದಲ್ಲಿ ನಡೆದು ಬಂದ ದಾರಿ ಮರೆಯಬಾರದು. ಒಗ್ಗಟ್ಟಿನಲ್ಲಿ ಬಹಳಷ್ಟು ಬಲವಿದೆ. ಆದರೆ ಆ ಒಗ್ಗಟ್ಟಿನ ರಹಸ್ಯವು ಸಂಘಟನೆಯಲ್ಲಿದೆ. ಹೆಜ್ಜೆ ತಪ್ಪಿದರೆ ಸರಿಪಡಿಸಿಕೊಳ್ಳಬಹುದು. ಆದರೆ ನಾಲಿಗೆ ತಪ್ಪಿದರೆ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಮೌಲ್ಯಾಧಾರಿತ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆಗಳು ಸಕಲರಿಗೂ ಒಳಿತನ್ನು ಉಂಟು ಮಾಡುತ್ತವೆ ಎಂದರು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶ್ರೀಗಳು, ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶ್ರೀಗಳು, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶ್ರೀಗಳು, ಹಿರೇಸಿಂದೋಗಿ ಹಿರೇಮಠದ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ 5 ಜನ ಜಂಗಮ ವಟುಗಳಿಗೆ ಅಯ್ಯಚಾರ ಶಿವದೀಕ್ಷೆ ನಡೆಯಿತು. ಬೆಂಗಳೂರಿನ ಬಾಳೆಲೆ ಬಸವರಾಜ ಮತ್ತು ತಂಡದವರು ಶ್ರೀ ರಂಭಾಪುರಿ ಜಗದ್ಗುರುಗಳ ಪಾದಪೂಜೆ ನೆರವೇರಿಸಿ, ಗೌರವ ಸಮರ್ಪಿಸಿದರು.