ಸಂಸತ್‌ನಲ್ಲಿ ರಚನಾತ್ಮಕ ಚರ್ಚೆ ನಡೆಯುತ್ತಿಲ್ಲ

1
Published on

ಮೈಸೂರು: ಇಂದಿನ ಸಂಸತ್ ಅಧಿವೇಶನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತಹ ರಚನಾತ್ಮಕ ಚರ್ಚೆಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿವೆ ಎಂದು ವಾಣಿವಿಲಾಸ ಅರಸು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಮತ್ತು ಆಡಳಿತ ಮುಖ್ಯಸ್ಥ ಸಿದ್ದಪ್ಪ ಕಳವಳ ವ್ಯಕ್ತಪಡಿಸಿದರು.


ನಗರದ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಕಾಲೇಜು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ವತಿಯಿಂದ ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿದ್ದ ತಾಲೂಕು ಮಟ್ಟದ ಯುವ ಸಂಸತ್ ಕಲ್ಪಿತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ದಶಕಗಳಿಂದ ನಡೆಯತ್ತಿರುವ ಸಂಸತ್ ಅಧಿವೇಶನಗಳನ್ನು ನೋಡಲು ಸಾಧ್ಯವಾದ ಮಟ್ಟಿಗೆ ಬೀದಿ ರಂಪಾಟವಾಗಿದೆ. ರಚಾನಾತ್ಮಕ ಚರ್ಚೆಗಳ ಕೇಂದ್ರವಾಗಬೇಕಿದ್ದ ಸಂಸತ್ ಅಧೀವೇಶನಗಳು ಇಂದು ವೈಯಕ್ತಿಕ ಕೆಸರೆರಚಾಟದ ಕೂಪವಾಗಿ ಮಾರ್ಪಾಡಾಗುತ್ತಿರುವು ನಿಜಕ್ಕೂ ಬೇಸರದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತ ಪ್ರಪಂಚದಲ್ಲೇ ಬೃಹತ್ ಸಂವಿಧಾನ ಹೊಂದಿರುವ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯನ್ನು ತನ್ನಾಗಿಸಿಕೊಂಡಿದೆ. ಆದ್ದರಿಂದ ವೈಯಕ್ತಿಕ ಟೀಕೆಗಳನ್ನು ಬದಿಗೊತ್ತಿ ಸಂವಿಧಾನದ ಆಶಯಗಳಿಗೆ ಅನುಗಣವಾಗಿ ನಮ್ಮ ನಾಯಕರು ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.

ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ಗೌರವ ಕಾರ್ಯದರ್ಶಿ ಮಹೇಶ್ ಎನ್. ಅರಸು ಮಾತನಾಡಿ, ನಮ್ಮ ಯುವಕರಿಗೆ ರಾಜಕೀಯ ಪ್ರಜ್ಞೆ ಬಹಳ ಮುಖ್ಯ. ಮಾಹಿತಿಗೂ ಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಕೇವಲ ಮಾಹಿತಿ ಸಂಗ್ರಹಕ್ಕೆ ಮುಂದಾಗದೆ ಜ್ಞಾನ ಸಂಪಾದಿಸುವ ಕಡೆ ಯುವಶಕ್ತಿ ಗಮನ ಹರಿಸಬೇಕು. ಪ್ರತಿಯೊಬ್ಬರಿಗೂ ಸಿಂಪತಿ ಮತ್ತು ಎಂಪತಿ ಎಂಬುದು ಬಹಳ ಮುಖ್ಯ. ಇನೊಬ್ಬರ ನೋವಿಗೆ ಕೇವಲ ಸಿಂಪತಿ ತೋರಿಸಿದರೆ ಸಾಲದು, ಆ ನೋವನ್ನು ನಮ್ಮದೇ ನೋವು ಎಂದು ಭಾವಿಸುವ ಎಂಪತಿ ಇರಬೇಕು ಎಂದು ಕಿವಿಮಾತು ಹೇಳಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ಸುಮಾರು 200 ವರ್ಷಗಳ ಕಾಲ ಭಾರತ ಬ್ರಿಟಿಷರ ಆಳ್ವಿಕೆಗೆ ತುತ್ತಾಗಿತ್ತು. ಗಾಂಧಿ, ಅಂಬೇಡ್ಕರ್, ನೆಹರು, ಪಟೇಲ್, ಬೋಸ್ ಹಾಗೂ ಭಗತ್ ಸಿಂತ್ ಹಲವಾರು ಹೋರಾಟಗಾರರು ಬ್ರಿಟಿಷರ್ ವಿರುದ್ಧ ದೀರ್ಘಕಾಲ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಜೆ.ಸಿ. ಅನಿತಾ, ಟ್ರಸ್ಟಿನ ಬಿ.ಪಿ. ಬಾಲಚಂದ್ರ ಅರಸ್, ಅಪೂರ್ವ, ಹೇಮಲತಾ, ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net