ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಗೊಂದಲವಿಲ್ಲ

18
Published on

ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್‌ನವರು ಮೂರು ಸೀಟು ಕೇಳಿದ್ದರು. ಈ ಬಗ್ಗೆ ವರಿಷ್ಠರ ಹಂತದಲ್ಲಿ ಎಲ್ಲವೂ ತೀರ್ಮಾನವಾಗಲಿದೆ. ನಾವು ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮೈಸೂರಿನ ಹೆಬ್ಬಾಳದಲ್ಲಿರುವ ಲಕ್ಷ್ಮೀಕಾಂತ ದೇವಾಲಯಕ್ಕೆ ಬುಧವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರನ್ನೂ ರಾಜ್ಯಾದ್ಯಂತ ಪಕ್ಷದ ಪ್ರಚಾರಗಳಿಗೆ ಆಹ್ವಾನಿಸಲಾಗುವುದು. ಈಗಾಗಲೇ ಮೈಸೂರು ಅಭ್ಯರ್ಥಿ ಯದುವೀರ್ ಪ್ರಚಾರ ಪ್ರಾರಂಭ ಮಾಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅವರನ್ನು ಖುದ್ದಾಗಿ ಭೇಟಿಯಾಗಿ ಬೆಂಬಲ ಕೇಳಿದ್ದಾರೆ. ಸಭೆ ನಡೆಸಿ ಒಟ್ಟಿಗೆ ಪ್ರಚಾರ ಶುರು ಮಾಡಲು ತೀರ್ಮಾನಿಸಲಾಗಿತ್ತು. ಈ ನಡುವೆ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಮುಖಂಡರಾದ ಹರೀಶ್‌ಗೌಡ, ಮಹದೇವು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net