ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲ

There is no compromise in social justice
ಬಾಗಲಕೋಟೆಯ ನವನಗರದ ಭೋವಿ ಗುರು ಪೀಠದಿಂದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೀಠದ ಗುರುಕುಟೀರ ಉದ್ಘಾಟನೆ ನಂತರ ಸಿದ್ದರಾಮೇಶ್ವರ ಮೂರ್ತಿಗೆ ಸಿಎಂ ಸಿದ್ದರಾಮಯ್ಯ ನಮನ ಸಲ್ಲಿಸಿದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಇದ್ದರು.
Published on

ಬಾಗಲಕೋಟೆ: ಸಿದ್ಧರಾಮೇಶ್ವರರು ನೇರ ನುಡಿಯ ನಿಷ್ಠುರ ವಚನಕಾರರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನವನಗರದ ಭೋವಿ ಗುರು ಪೀಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೀಠದ ಗುರು ಕುಟೀರ ಉದ್ಘಾಟನೆ, ಶ್ರೀ ಶರಣ ಬಸವ ಸ್ವಾಮೀಜಿಗಳ ಗದ್ದುಗೆ ಶಿಲಾನ್ಯಾಸ, ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶರಣರು ದಯವೇ ಧರ್ಮದ ಮೂಲವಯ್ಯ ಅಂತ ಸಾರಿದರು. ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯರಲ್ಲ ಎನ್ನುವುದು ಅರ್ಥ ಮಾಡಿಕೊಳ್ಳಬೇಕು ಎಂದರು. 2015-16 ರಲ್ಲಿ ನಮ್ಮ ಸರ್ಕಾರ ಇದ್ದಾಗ ಭೋವಿ ಸಮಾಜದ ಅಭಿವೃದ್ಧಿ ನಿಗಮ ಮಾಡಿದೆ. ಮುಂದೆಯೂ ಸಮಾಜದ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಶಿವರಾಜ ತಂಗಡಗಿ ಮಾತನಾಡಿ, ದೇವರಾಜ ಅರಸು ಕಾಲದಲ್ಲಿ ಭೋವಿ ಸಮಾಜವನ್ನು ಎಸ್‌ಸಿಗೆ ಸೇರ್ಪಡೆಗೊಳಿಸಲಾಯಿತು. ಸಿದ್ದರಾಮಯ್ಯ ಅವರು ಕಳೆದ ಅವಧಿಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಈ ಸಾರಿ ಅಧ್ಯಯನ ಪೀಠ ಸ್ಥಾಪಿಸಬೇಕು. ಕೆಪಿಎಸ್‌ಸಿ ಸದಸ್ಯರನ್ನಾಗಿ ಸಮಾಜದ ವ್ಯಕ್ತಿ ಆಯ್ಕೆ ಮಾಡಬೇಕು. ಸಮಾಜವು ಬಡತನದಲ್ಲಿದ್ದು, ಅವಕಾಶ ವಂಚಿತವಾಗಿದೆ. ಅನುದಾನ ನೀಡಿ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮುಂಬರುವ ಲೋಕಸಭಾ ಚುನಾವಣೆಗೆ ಸಮಾಜದ ನಾಯಕರೊಬ್ಬರಿಗೆ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು. ಕಿತ್ತೂರು ಚನ್ನಮ್ಮ ಕಾಲದಲ್ಲಿದ್ದ ವಡ್ಡರ ಯಲ್ಲಣ್ಣನ ಪ್ರಾಧಿಕಾರ ಸ್ಥಾಪಿಸಬೇಕು. ಸಮಾಜವು ಸದಾ ತಮ್ಮನ್ನು ಸ್ಮರಿಸಲಿದೆ ಎಂದು ಹೇಳಿದರು.

ಇಳಕಲ್ಲ ಗುರು ಮಹಾಂತ ಶ್ರೀಗಳು, ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ವಿಜಯಾನಂದ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷರಾದ ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಮುಖಂಡ ಅಶೋಕ ಲಿಂಬಾವಳಿ ಇತರರು ಇದ್ದರು.

ಅಕ್ಷರದ ವಾರಸುದಾರರು ದೇವರನ್ನು ಆಳುತ್ತಾರೆ. ಹೀಗಾಗಿ ಸಮಾಜದ ಬಾಂಧವರು ವಿದ್ಯೆಗೆ ಮಹತ್ವ ನೀಡಬೇಕು. ಭಕ್ತರ ಮನೆಗೆ ಪ್ರಸಾದಕ್ಕೆ ಹೋದಾಗ ರೊಟ್ಟಿ ನೀಡುತ್ತಿದ್ದರು. ಇದೀಗ ಸಿಹಿ ಊಟ ಉಣಬಡಿಸುತ್ತಾರೆ. ಇದಕ್ಕೆ ಕಾರಣ ಸ್ತ್ರೀ ಶಕ್ತಿ ಯೋಜನೆ ಮೂಲಕ 2 ಸಾವಿರ ರೂ. ಸರ್ಕಾರ ನೀಡುತ್ತಿರುವುದರಿಂದ ಬಡವರ ಮನೆಗಳಲ್ಲಿ ಉಲ್ಲಾಸ ತುಂಬಿದೆ. ಕನ್ನಡಿಗರ ಯೋಜನೆಗಳು ಇದೀಗ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಣಾಳಿಕೆಗಳಾಗಿ ಚರ್ಚೆಯಲ್ಲಿರುವುದು ಸಂತಸ ತಂದಿದೆ.
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ ಬಾಗಲಕೋಟೆ

ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಇಬ್ಬರು ಹಿಂದುಳಿದ ವರ್ಗ, ದಲಿತರಿಗೆ ನ್ಯಾಯ ಕೊಡಿಸುತ್ತಿದ್ದಾರೆ. ಸದಾ ರಕ್ಷಣೆಗೆ ಬರುತ್ತಾರೆ. ಕಾಳಜಿ ಹೊಂದಿರುವ ಇಬ್ಬರು ನಾಯಕರ ಕೊಡುಗೆ ಅಪಾರವಾಗಿದೆ. ನವನಗರದಲ್ಲಿ ಈಗಾಗಲೇ ಭೋವಿ ಸಮಾಜಕ್ಕೆ ಜಾಗ ನೀಡಲಾಗಿದೆ. ಸಮಾಜದ ಮಕ್ಕಳ ಓದುವುದಕ್ಕೆ ವಸತಿ ನಿಲಯ, ಶಾಲೆ ಸ್ಥಾಪಿಸಲು ಪಕ್ಕದಲ್ಲಿರುವ ಬಿಟಿಡಿಎ ಜಾಗ ನೀಡಬೇಕು. ಬೆಂಗಳೂರಿನಲ್ಲಿ ಮಠಕ್ಕೆ ಸರ್ಕಾರದಿಂದ ಜಾಗ ಮಂಜೂರು ಮಾಡಬೇಕು. ಸದಾಶಿವ ಆಯೋಗದ ವರದಿ ಈ ಹಿಂದೆ ತಿರಸ್ಕಾರ ಮಾಡಲಾಗಿದೆ. ಈಗ ಮತ್ತೆ ಚಲಾವಣೆಗೆ ಬಂದಲ್ಲಿ ವರದಿ ತಳ್ಳಿ ಹಾಕುವ ಭರವಸೆ ಇದೆ.

ಅರವಿಂದ ಲಿಂಬಾವಳಿ, ಮಾಜಿ ಸಚಿವ

ಹಿಂದುಳಿದ ಸಮಾಜದ ಬಗ್ಗೆ ಸಿದ್ದರಾಮಯ್ಯ ಕಾಳಜಿ ವಹಿಸುತ್ತಾರೆ. ನಾನು ವಿರೋಧ ಪಕ್ಷದಲ್ಲಿ ಇದ್ದರೂ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಕಾಯಕ ಜೀವಿ ಸಮಾಜವಾಗಿರುವ ಭೋವಿ ಸಮಾಜದ ಬಗ್ಗೆ ಕಳಕಳಿ ಹೊಂದಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳು ಜಾರಿಗೊಂಡಿವೆ.

ಮಾನಪ್ಪ ವಜ್ಜಲ ಲಿಂಗಸುಗೂರು ಬಿಜೆಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net