

ನರಗುಂದ: ತಾಲೂಕಿನಲ್ಲಿ ಒಟ್ಟು 50,322 ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ವಾಡಿಕೆ ಪ್ರಕಾರ ಏಪ್ರಿಲ್‌ನಿಂದ ಜೂನ್ ತಿಂಗಳ ವರೆಗೆ ಹದವಾದ ಮಳೆ ಸುರಿಯಬೇಕಿತ್ತು. ಆದರೆ ತಾಲೂಕಿನಲ್ಲಿ ಸರಿಯಾಗಿ ಮುಂಗಾರು ಪೂರ್ವ ಮಳೆ ಸುರಿಯಲಿಲ್ಲ. ಪರಿಣಾಮ 17,600 ಹೆಕ್ಟೇರ್ ಬಿತ್ತನೆ ಪೈಕಿ ಕೇವಲ 4,500 ಹೆಕ್ಟೆರ್‌ನಲ್ಲಿ ಹೆಸರು ಬಿತ್ತನೆ ಆಗಿದೆ.
ಹಿಂದೆ ಕೆಲ ರೈತರು ಕೃಷಿಭಾಗ್ಯ ಯೋಜನೆಯಡಿ ನಿರ್ಮಿಸಿಕೊಂಡಿದ್ದ 2,300ಕ್ಕೂ ಅಧಿಕ ಕೃಷಿ ಹೊಂಡಗಲ್ಲಿ ಸಂಗ್ರಹವಾದ ನೀರಿನಿಂದ 5,688 ಕ್ವಿಂಟಲ್ ಹೆಸರುಬೆಳೆಯನ್ನು ರೈತರು ಈಗಾಗಲೇ ವರ್ತಕರಿಗೆ ಮಾರಾಟ ಮಾಡಿದ್ದಾರೆ.
ಕೃಷಿ ಇಲಾಖೆ ಹೊಂದಿದ್ದ 39,450 ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 28,170 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಗೋವಿನಜೋಳ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. 15,100 ಹೆಕ್ಟೇರ್ ಗೋವಿನಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಪೂರ್ವ ಮುಂಗಾರಿನಲ್ಲಿ ಹೆಸರು ಸರಿಯಾಗಿ ಬಿತ್ತನೆಯಾಗದೆ ಈಗ 23,3350 ಹೆಕ್ಟೇರ್‌ಗೂ ಅಧಿಕ ಜಮೀನಿನಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಆದೂ ಸಹ ಸೂರ್ಯನ ತಾಪಕ್ಕೆ ಕಮರುತ್ತಿವೆ.
ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಪ್ರಥಮ ಹಂತದಲ್ಲಿ ತಾಲೂಕಿನ ಸಂಕಧಾಳ, ಹದಲಿ, ಸುರಕೋಡ, ಮದಗುಣಕಿ ಒಟ್ಟು,4 ಗ್ರಾಮಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ. ನರಗುಂದ ತಾಲೂಕು ಬರಪೀಡಿತ ಎಂದು ಸರ್ಕಾರದಿಂದ ಘೋಷಣೆ ಮಾಡಿದರೆ ತಹಸೀಲ್ದಾರ್ ಖಜಾನೆಯಲ್ಲಿ ನಯಾಪೈಸೆ ಅನುದಾನವಿಲ್ಲ. ಬರಗಾಲಪೀಡಿತ ತಾಲೂಕು ಎಂದು ಘೋಷಣೆಯಾದ ಬಳಿಕ ಮುಂದಿನ ಪರಿಹಾರ ಕ್ರಮಗಳನ್ನು ಸರ್ಕಾರದ ನಿರ್ದೇಶದಂತೆ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.
ಮಳೆ ಕೊರತೆ ನಡುವೆಯೂ ನರಗುಂದ ತಾಲೂಕಿನಾದ್ಯಂತ ಶೇ.71ರಷ್ಟು ವಿವಿಧ ಬೆಳೆಗಳ ಬಿತ್ತನೆಯಾಗಿದೆ. ನಿಗದಿತ ಸಮಯದಲ್ಲಿ ಮತ್ತೊಂದು ಮಳೆ ಸುರಿಯದಿದ್ದರೆ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.-ನವೀನಕುಮಾರ ಪಾಟೀಲ. ಕೃಷಿ ಅಧಿಕಾರಿ ನರಗುಂದ