ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ

22M.D.R.8
ಮದ್ದೂರು ತಾಲೂಕಿನ ನಿಡಘಟ್ಟದಲ್ಲಿ ಡಾ.ಬಾಬುಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಹರೀಶ್, ಉಮಾ, ಮಹೇಶ್, ಪ್ರಕಾಶ್, ರವಿ ಇದ್ದರು.
Published on

ಮದ್ದೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ. ಎಂ.ಉದಯ್ ತಿಳಿಸಿದರು.

ತಾಲೂಕಿನ ನಿಡಘಟ್ಟದಲ್ಲಿ ಇತ್ತೀಚೆಗೆ ಡಾ.ಬಾಬುಜಗಜೀವನ್‌ರಾಂ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಹಾಗೆಯೇ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಳೆದ 3 ವರ್ಷಗಳಿಂದ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದಾಖಲೆಯೆಬಂತೆ ಪಕ್ಷವು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 138 ಸ್ಥಾನಗಳನ್ನು ಪಡೆಯುವುದರ ಮೂಲಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯಲು ಸಾಧ್ಯವಾಗಿದೆ ಎಂದರು.

ಹೀಗಿರುವಾಗ ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳು ಅಬಾಧಿತವಾಗಿದ್ದು, ಯಾರ ಬದಲಾವಣೆಯ ಪ್ರಶ್ನೆ ಉದ್ಭವಿಸಲ್ಲ, ಕೆಲವರು ಸುಮ್ಮನೆ ಈ ಬಗ್ಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಅಷ್ಟೇ ಎಂದ ಅವರು, ಮುಂದೆ ಪಕ್ಷದ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ ಎಂದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿಗೆ ಹೆಚ್ಚು ಒತ್ತು ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಾಗಳಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇಷ್ಟರಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್, ಗ್ರಾಪಂ ಅಧ್ಯಕ್ಷೆ ಕೆ.ಪಿ.ಉಮಾ, ಸದಸ್ಯ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ನಿಡಘಟ್ಟ ಎನ್.ಎಂ.ಪ್ರಕಾಶ್, ಮುಖಂಡರಾದ ಕದಲೂರು ರವಿ,ಯತೀಶ್, ನಾರಾಯಣ, ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net