

ಮಂಗಳೂರು: ಮಹತ್ವಾಕಾಂಕ್ಷಿ ಯೋಜನೆ ಸಾಗರ್ ಮಾಲಾದ ಭಾಗವಾದ ಕುಳಾಯಿ ಕಿರು ಬಂದರು ಯೋಜನೆಯ ಬ್ಲೂಪ್ರಿಂಟ್ ಬದಲಾವಣೆ ಇಲ್ಲ ಎಂದು ಎನ್‌ಎಂಪಿಎ ಸ್ಟಷ್ಟೀಕರಿಸಿದೆ.
ಪಣಂಬೂರು, ಕುಳಾಯಿ, ಸುರತ್ಕಲ್, ಹಳೆಯಂಗಡಿ, ಸಸಿಹಿತ್ಲು ಪರಿಸರದ ಸಾವಿರಾರು ಮೀನುಗಾರರಿಗೆ ಉಪಯೋಗವಾಗುವ ದೃಷ್ಠಿಯಿಂದ 196.51 ಕೋಟಿ ರೂ. ವೆಚ್ಚದ ಕುಳಾಯಿ ಜೆಟ್ಟಿ ಯೋಜನೆ ಕೈಗೊಳ್ಳಲಾಗಿದೆ. ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ 11.5ಎಕರೆ ಜಮೀನನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. 45 ಸಾವಿರ ಚದರ ಅಡಿ ಪ್ರದೇಶದಲ್ಲಿ ಜೆಟ್ಟಿ ನಿರ್ಮಾಣಕ್ಕೆ ಪುಣೆಯ ಸೆಂಟರ್ ವಾಟರ್ ಆ್ಯಂಡ್ ಪವರ್ ರಿಸರ್ಚ್ ಸ್ಟೇಷನ್ (ಸಿಡಬ್ಲ್ಯುಪಿಆರ್‌ಎಸ್) ಅಧ್ಯಯನ ವರದಿ ತಯಾರಿಸಿದೆ. 350 ದೊಡ್ಡ ಬೋಟುಗಳ ನಿಲುಗಡೆಗೆ ವಿನ್ಯಾಸ ಮಾಡಿದ್ದು, ಅದರಲ್ಲಿ ಮೀನು ಇಳಿಸಲು ಲ್ಯಾಂಡಿಂಗ್ ಜೆಟ್ಟಿ, ಬೋಟ್ ನಿಲ್ಲಿಸಲು ಐಡ್‌ಲ್ ಬತಿರ್ಂಗ್ ಜೆಟ್ಟಿ, ಹರಾಜು ಪ್ರಾಂಗಣ, ಬೋಟ್ ದುರಸ್ತಿ ಅಂಗಣ, ಬಲೆ ಇಡುವ ಶೆಡ್, ಮೀನುಗಾರರ ವಿಶ್ರಾಂತಿ ಗೃಹ, ಎರಡು ಕಡೆ ಬ್ರೇಕ್ ವಾಟರ್, ಕುಡಿಯುವ ನೀರು, ಸಂಪರ್ಕ ರಸ್ತೆ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ವಿನ್ಯಾಸ ಮಾಡಲಾಗಿದೆ.
*ಬ್ಲೂಪ್ರಿಂಟ್ ಬದಲಾವಣೆ ಇಲ್ಲ
ಕುಳಾಯಿ ಕಿರು ಬಂದರು ಯೋಜನೆಯಲ್ಲಿ ಎನ್‌ಎಂಪಿಎ ಕೇವಲ ನಿರ್ವಹಣಾ ಸಂಸ್ಥೆಯಾಗಿದೆ ಮತ್ತು ಬೆಂಗಳೂರು ಕೇಂದ್ರೀಯ ತೀರ ಇಂಜಿನಿಯರಿಂಗ್ ಮತ್ತು ಮೀನುಗಾರಿಕೆ ಸಂಸ್ಥೆ (ಸಿಐಸಿಇಎಫ್) ತಯಾರಿಸಿದ ಡಿಪಿಆರ್ ಮತ್ತು ಬಂದರು ಮತ್ತು ಮೀನುಗಾರಿಕೆ ವಿಭಾಗ, ಉಡುಪಿ, ಕರ್ನಾಟಕ ಸರ್ಕಾರ ತಯಾರಿಸಿದ ಅಂದಾಜಿನ ಆಧಾರದ ಮೇಲೆ ಕೆಲಸವನ್ನು ನಿರ್ವಹಿಸುತ್ತಿದೆ. ಈಗಾಗಲೇ ಫೆ.4ರ ಪ್ರಕಟಣೆಂತೆ ಎನ್‌ಎಂಪಿಎ ಮಂಡಳಿಯು ರಚಿಸಿದ ಮೂರು ಸದಸ್ಯ ತಾಂತ್ರಿಕ ತಜ್ಞ ಸಮಿತಿಯ ವರದಿಯನ್ನು ಜನವರಿ 21 ಮತ್ತು ಫೆ.3 ರಂದು ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಗೆ ಸಮರ್ಪಿಸಿದ್ದು, ತಾಂತ್ರಿಕ ತಜ್ಞ ಸಮಿತಿಯ ವರದಿಯ ಫಲಿತಾಂಶಗಳನ್ನು ಪರಿಗಣಿಸಿ ಕುಳಾಯಿ ಮೀನುಗಾರಿಕಾ ಬಂದರಿನ ಬ್ರೇಕ್‌ವಾಟರ್ ಕೆಲಸವನ್ನು ತಕ್ಷಣ ಪುನರಾರಂಭಿಸಲು ವಿನಂತಿಸಿದೆ.
*ರಾಷ್ಟ್ರೀಯಯ ಹಿತಾಸಕ್ತಿ ಮಹತ್ತರ ಯೋಜನೆ
ಕುಳಾಯಿ ಕಿರು ಬಂದರು ಯೋಜನೆಯು ರಾಷ್ಟ್ರೀಯಯ ಹಿತಾಸಕ್ತಿಯಿಂದ ಕೂಡಿದ್ದು, ಈವರೆಗೆ ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯಿಂದ ಯಾವುದೇ ಸ್ಪಷ್ಟ ಕಾರ್ಯಾಚರಣೆ ಕೈಗೊಳ್ಳಲಾಗಿಲ್ಲ. ಈಗ ಕೇಂದ್ರ ನೀರು ಮತ್ತು ವಿದ್ಯುತ್ ಸಂಶೋಧನಾ ಕೇಂದ್ರ, ಪುಣೆಯು ಬಂದರಿನ ಯೋಜನೆಗಾಗಿ ಅಲೆ ಶಾಂತ್ಯತೆಯ ಬಗ್ಗೆ ತನ್ನ ವರದಿಯನ್ನು ಸಲ್ಲಿಸಿದ್ದು, 831 ಮೀಟರ್ ಉದ್ದದ ಉತ್ತರ ಬ್ರೇಕ್‌ವಾಟರ್ ಮತ್ತು 264 ಮೀಟರ್ ಉದ್ದದ ದಕ್ಷಿಣ ಬ್ರೇಕ್‌ವಾಟರ್ ಅಭಿವೃದ್ಧಿಯು ತ್ರಾಲರ್‌ಗಳು ಮತ್ತು ಸಣ್ಣ ಮೀನುಗಾರಿಕಾ ನೌಕೆಗಳು ಬಂದರಿನ ಒಳಗೆ ಮತ್ತು ಮಳೆಗಾಲದ ಸಮಯದಲ್ಲೂ ಸಹ ಪ್ರವೇಶದ್ವಾರದ ಮೂಲಕ ಪ್ರವೇಶಿಸುವುದಕ್ಕಾಗಿ ಸೂಕ್ತ ಅಲೆ ಶಾಂತ್ಯತೆ ಒದಗಿಸುತ್ತದೆ ಎಂದು ತಿಳಿಸಿದೆ
ಮಳೆಗಾಲವು ಶೀಘ್ರದಲ್ಲೇ ಸಮೀಪಿಸುತ್ತಿರುವುದರಿಂದ, ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರವು ಮೀನುಗಾರಿಕೆ ಬಂದರಿನ ಯೋಜನೆಯ ಪುನರಾರಂಭದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎನ್‌ಎಂಪಿಎ ವಿನಂತಿಸಿದೆ.