ಗೊದ್ದನಪುರ ಗ್ರಾಮದಲ್ಲಿಲ್ಲ ಸ್ಮಶಾನ

 ಗೊದ್ದನಪುರ ಗ್ರಾಮಸ್ಥರು ಮೃತರ ಅಂತ್ಯಕ್ರಿಯೆ ಮಾಡುವ ಕಪಿಲ ನದಿ ತೀರದ ಸ್ಥಳ.
ಗೊದ್ದನಪುರ ಗ್ರಾಮಸ್ಥರು ಮೃತರ ಅಂತ್ಯಕ್ರಿಯೆ ಮಾಡುವ ಕಪಿಲ ನದಿ ತೀರದ ಸ್ಥಳ.
Published on

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ, ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಎಲ್ಲ ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನವಿಲ್ಲದ ಪರಿಣಾಮ ಕಪಿಲಾ ನದಿ ತೀರದ ದಡವೇ ಸ್ಮಶಾನ ಜಾಗವಾಗಿದೆ.

ದೇಶಕ್ಕೆ ಸ್ವಾತಂತ್ರೃ ಬಂದು 78 ವರ್ಷಗಳು ಕಳೆಯುತ್ತಿದ್ದರೂ ನಮ್ಮನ್ನಾಳುವ ಸರ್ಕಾರಗಳು ಕನಿಷ್ಠ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂಬುದು ಗ್ರಾಮಸ್ಥರ ಆರೋಪ. ಗ್ರಾಮದಲ್ಲಿ ಸುಮಾರು 2500 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಇಲ್ಲಿ ಎಲ್ಲ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಆದರೆ ಯಾವ ಸಮುದಾಯಕ್ಕೂ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲದ ಪರಿಣಾಮ ಕಪಿಲಾ ನದಿಯ ದಡದ ಕೆಸರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಕೆಸರು: ಮಳೆಗಾಲದಲ್ಲಿ ನದಿ ತೀರದ ಸುತ್ತಮುತ್ತಲಿನ ಪ್ರದೇಶಗಳು ಕೆಸರಿನಿಂದ ಕೂಡಿರುತ್ತವೆ. ಈ ಸಂದರ್ಭದಲ್ಲಿ ಯಾರಾದರೂ ಮೃತಪಟ್ಟರೆ ಶವ ಸಂಸ್ಕಾರಕ್ಕೆ ದಾರಿ ಇಲ್ಲದೆ ಕೊಳಚೆ ನೀರಿನಲ್ಲಿಯೇ ಶವ ಹೊತ್ತು ಹೋಗಬೇಕಿದೆ. ಕೆಸರು ಮಣ್ಣಿನಲ್ಲಿ ಜನರು ನಡೆಯುವುದೇ ಕಷ್ಟವಾಗಿದ್ದು, ಶವ ತೆಗೆದುಕೊಂಡು ಹೋಗುವ ಸಂದರ್ಭ ಸಾಕಷ್ಟು ಹೆಣಗಾಡಬೇಕಾಗಿದೆ. ಅಲ್ಲದೆ ಅಂತ್ಯಕ್ರಿಯೆಗೆ ತೆರಳುವ ಜನರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

ಗುಂಡಿ ತುಂಬೆಲ್ಲ ನೀರು: ನದಿಯ ಪಕ್ಕದಲ್ಲಿ ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ಶವವನ್ನು ಹೂಳಲು ಗುಂಡಿ ತೆಗೆದರೆ ಸಾಕು ನೀರು ತುಂಬಿಕೊಳ್ಳುತ್ತದೆ. ಆದರೂ ವಿಧಿಯಿಲ್ಲದೆ ಶವ ಸಂಸ್ಕಾರ ಮಾಡಲಾಗುತ್ತದೆ. ಇದರಿದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂಬುದು ಗ್ರಾಮಸ್ಥರ ಅಳಲು.

ಸ್ಪಂದಿಸದ ಅಧಿಕಾರಿಗಳು: ಕಳೆದ 20 ವರ್ಷಗಳಿಂದ ಸ್ಮಶಾನಕ್ಕಾಗಿ ಭೂಮಿ ನೀಡುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಗೊದ್ದನಪುರ ಗ್ರಾಮದ ಸವೇ ನಂ. 34 ಮತ್ತು 70 ರಲ್ಲಿ ಸರ್ಕಾರಿ ಭೂಮಿ ಇದ್ದು, ಇದರಲ್ಲಿ ಎರಡು ಎಕರೆ ಭೂಮಿಯನ್ನು ಸ್ಮಶಾನಕ್ಕೆ ನೀಡಿದರೆ ಅನುಕೂಲ. ಅಲ್ಲದೆ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿ. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಮತ್ತೆ ನಾಪತ್ತೆಯಾಗುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ಈ ರೀತಿಯಾದರೆ ಇನ್ನುಳಿದ ಕ್ಷೇತ್ರಗಳ ಗತಿಯೇನು ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

ಸರ್ಕಾರ ಗಮನಹರಿಸಬೇಕಾಗಿದೆ: ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದೆ ಎಲ್ಲ ಸಮುದಾಯದ ಜನರು ಪರದಾಡುವಂತಾಗಿದೆ. ಸ್ವಂತ ಭೂಮಿ ಇರುವ ಜನರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಜಮೀನು ಇಲ್ಲದ ಅತಿ ಸಣ್ಣ ಸಮುದಾಯದ ಜನರು ಕೆರೆಯ ಆವರಣ, ಕಾಲುವೆಗಳ ಏರಿ ಸೇರಿದಂತೆ ಹಲವು ಜಾಗಗಳಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಸಾಮಾನ್ಯ. ಎಲ್ಲ ಸಮುದಾಯದ ಜನರಿಗೆ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗುತ್ತಿದೆ. ಅದರೊಂದಿಗೆ ಸ್ಮಶಾನಕ್ಕೆ ಭೂಮಿಯನ್ನು ಸರ್ಕಾರ ನೀಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗಾಗಿ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯವು ದೇಶಕ್ಕೆ ಮಾದರಿಯಾಗಿದೆ ಎನ್ನುತ್ತಾರೆ. ಹಾಗಾಗಿ ಜನರಿಗೆ ಕನಿಷ್ಟ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಾಗಿದೆ.

ಸ್ಮಶಾನ ಇಲ್ಲದೆ ನಾವು ಗ್ರಾಮದಲ್ಲಿರುವ ಕಪಿಲಾ ನದಿಯ ತೀರದಲ್ಲಿ ಸುಮಾರು 20 ವರ್ಷಗಳಿಂದಲೂ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ಸ್ಮಶಾನವೂ ಇಲ್ಲ, ದಾರಿಯೂ ಇಲ್ಲ. ಸ್ಮಶಾನ ಭೂಮಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಚೆಲುವಸ್ವಾಮಿ, ದಸಂಸ ತಾಲೂಕು ಸಂಚಾಲಕ, ಗೊದ್ದನಪುರ ಗ್ರಾಮ

ಹೆಸರಿಗಷ್ಟೇ ಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಆದರೆ ಇಲ್ಲಿ ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ. ಸರ್ವೇ ನಂ.34 ಮತ್ತು 70ರಲ್ಲಿ ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಸ್ಥಳವನ್ನು ಗುರುತಿಸಿ ಎರಡು ಎಕರೆಯನ್ನು ಸ್ಮಶಾನಕ್ಕೆ ನೀಡಿದರೆ ಅನುಕೂಲವಾಗಲಿದೆ. ಬದುಕಿದ್ದಾಗಲು ನೋವು, ಸತ್ತಾಗ ಅಂತ್ಯಕ್ರಿಯೆಗೂ ಪರದಾಡಬೇಕು.

ರಾಕೇಶ್‌ಗೌಡ ಕಾಂಗ್ರೆಸ್ ಮುಖಂಡ, ಗೊದ್ದನಪುರ

ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ತುಂಬ ನೋವು ಆಗುತ್ತದೆ. ಇತ್ತ ತೆರಳಲು ದಾರಿಯೂ ಇಲ್ಲ, ಸರಿಯಾಗಿ ಅಂತ್ಯ ಸಂಸ್ಕಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಗಿನಿಂದಲೂ ಸ್ಮಶಾನ ಭೂಮಿ ನೀಡುವಂತೆ ಕೇಳಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇನ್ನಾದರೂ ಸಿ.ಎಂ ಸಿದ್ದರಾಮಯ್ಯ ಅವರು ಗಮನಹರಿಸಿ ನಮಗೆ ಸ್ಮಶಾನ ಭಾಗ್ಯ ನೀಡಬೇಕಿದೆ.

ಸೋಮೇಶ್ ಅಧ್ಯಕ್ಷ, ಅಂಬೇಡ್ಕರ್ ಸಂಘ, ಗೊದ್ದನಪುರ.

ಸ್ಮಶಾನ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಗೊದ್ದನಪುರ ಗ್ರಾಮಕ್ಕೆ ಭೇಟಿ ನೀಡಿ, ಈಗಾಗಲೇ ಪರಿಶೀಲನೆ ನಡೆಸಿದ್ದೇನೆ. ಸ್ಮಶಾನಕ್ಕಾಗಿ ಸ್ಥಳವನ್ನು ಗುರುತಿಸಲಾಗಿದ್ದು, ಸರ್ವೇ ನಂ.222 ರಲ್ಲಿ ಸ್ಮಶಾನಭೂಮಿ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಮಾಡಲಾಗುವುದು. ಇನ್ನು ಕೆಲವೇ ತಿಂಗಳಲ್ಲಿ ಗೊದ್ದನಪುರ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲಾಗುವುದು.

ಶಿವಕುಮಾರ್ ಕಾಸ್ನೂರು, ತಹಸೀಲ್ದಾರ್, ನಂಜನಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net