ಸ್ಕೂಲ್ ಬಸ್‌ನಲ್ಲಿಲ್ಲ ಸಿಸಿ ಕ್ಯಾಮರಾ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಬಸ್, ವ್ಯಾನ್‌ನಂತಹ ಬಹಳಷ್ಟು ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿಲ್ಲ. ಮಕ್ಕಳ ಸುರಕ್ಷತೆಗೆ ಕಣ್ಗಾವಲು ಇಲ್ಲದಂತಾಗಿದೆ.

ಖಾಸಗಿ ಶಾಲೆಗಳ ಪ್ರತಿ ವಾಹನದಲ್ಲೂ ಸಿಸಿ ಕ್ಯಾಮರಾ ಅಳವಡಿಸಬೇಕು. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಇದು ಜಿಲ್ಲೆಯಲ್ಲಿ ಬಹುತೇಕ ಕಡೆ ಇನ್ನೂ ಜಾರಿಗೆ ಬಂದಿಲ್ಲ. ಶಾಲಾ ವಾಹನಗಳು ಸಿಸಿ ಕ್ಯಾಮರಾ ಇಲ್ಲದೆ ಸಂಚಾರ ಮಾಡುತ್ತಿವೆ.

ಜಿಲ್ಲೆಯಲ್ಲಿ 3,446 ಶಾಲೆಗಳಲ್ಲಿ 4.21 ಲಕ್ಷ ಮಕ್ಕಳು 1ರಿಂದ 10ನೇ ತರಗತಿವರೆಗೆ ಓದುತ್ತಿದ್ದಾರೆ. ಈ ಪೈಕಿ ಸರ್ಕಾರಿ ಶಾಲೆಗಳೇ ಹೆಚ್ಚು. 2112 ಸರ್ಕಾರಿ, 114 ಸಮಾಜ ಕಲ್ಯಾಣ ಮತ್ತು ಗಿರಿಜನ ಇಲಾಖೆ, 267 ಅನುದಾನಿತ, 927 ಅನುದಾನ ರಹಿತ, 16 ಕೇಂದ್ರ ಸರ್ಕಾರದ (ಕೇಂದ್ರೀಯ ವಿದ್ಯಾಲಯ, ನವೋದಯ, ಟಿಬೆಟಿಯನ್ ಶಾಲೆ) ಶಾಲೆಗಳಿವೆ.

ಈ ಪೈಕಿ ಅನುದಾನ ರಹಿತ ಖಾಸಗಿ ಶಾಲೆಯಲ್ಲೇ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಓದುತ್ತಿದ್ದಾರೆ. ಇಲ್ಲಿ ಮಕ್ಕಳ ಸಂಖ್ಯೆ 2.06 ಲಕ್ಷ ಇದೆ. ನಂತರ ಸ್ಥಾನದಲ್ಲಿರುವ ಶಿಕ್ಷಣ ಇಲಾಖೆ ಅಧೀನದ 2112 ಶಾಲೆಗಳಲ್ಲಿ 1.51 ಲಕ್ಷ ಮಕ್ಕಳಿದ್ದಾರೆ. ಅನುದಾನಿತ ಶಾಲೆಗಳಲ್ಲಿ 47190, ಸಮಾಜ ಕಲ್ಯಾಣ ಮತ್ತು ಗಿರಿಜನ ಇಲಾಖೆಯ ವ್ಯಾಪ್ತಿಯ ಶಾಲೆಗಳಲ್ಲಿ 11 ಸಾವಿರ, ಕೇಂದ್ರ ಸರ್ಕಾರದ ಶಾಲೆಗಳಲ್ಲಿ 5508 ಮಕ್ಕಳು ಕಲಿಯುತ್ತಿದ್ದಾರೆ.

ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಸ್, ವ್ಯಾನ್, ಕ್ಯಾಬ್‌ನಂತಹ ಶಾಲಾ ವಾಹನದ ವ್ಯವಸ್ಥೆ ಇದೆ. ಸರ್ಕಾರಿ ಶಾಲೆಗಳಲ್ಲಿ ವಾಹನ ವ್ಯವಸ್ಥೆ ಬಹುತೇಕ ಕಡೆ ಇಲ್ಲ.

ಇತ್ತೀಚೆಗೆ ಹೊಸದಾಗಿ ಖರೀದಿ ಮಾಡಿರುವ ಕೆಲ ಖಾಸಗಿ ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮರಾ ಇದೆ. ಈ ಸಂಖ್ಯೆ ಬಹಳ ಕಡಿಮೆ ಇದೆ. ಹಳೇ ಶಾಲಾ ಬಸ್‌ಗಳಲ್ಲಿ ಸಿಸಿ ಕ್ಯಾಮರಾಗಳೇ ಇಲ್ಲ. ಹೊಸದಾಗಿ ಈ ಸೌಲಭ್ಯವನ್ನು ಅಳವಡಿಕೆ ಮಾಡಲು ಶಿಕ್ಷಣ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಅನುದಾನಿತ ಶಾಲೆಗಳಲ್ಲೂ ಇದೇ ಕಥೆ !

ನಿರ್ವಹಣೆ, ನಿಗಾ ವಹಿಸಲಾಗುತ್ತಿಲ್ಲ


ಶಾಲಾ ವಾಹನಗಳಲ್ಲಿ ಮಹಿಳಾ ಸಹಾಯಕರನ್ನೇ ನೇಮಿಸಬೇಕೆಂಬ ಆದೇಶ ಬಹುತೇಕ ಪಾಲನೆ ಮಾಡಲಾಗುತ್ತಿದೆ. ಚಾಲಕರು, ಸಹಾಯಕರು ನಿತ್ಯ ಕೆಲಸ ಆರಂಭದ ಮೊದಲು ಮತ್ತು ಎಲ್ಲ ಮಕ್ಕಳನ್ನು ಮನೆಗಳಿಗೆ ಬಿಟ್ಟ ನಂತರ ಶಾಲೆಗೆ ವಾಪಸ್ ಬಂದು, ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಬೇಕು ಎಂದು ಶಿಕ್ಷಣ ಇಲಾಖೆ ತಾಕೀತು ಮಾಡಿದೆ. ಆದರೆ, ನಿರ್ವಹಣೆ, ನಿಗಾ ವಹಿಸಲಾಗುತ್ತಿಲ್ಲ.

ಆಟೊರಿಕ್ಷಾ ಸೇರಿದಂತೆ ಶಾಲಾ ಮಕ್ಕಳನ್ನು ಕರೆತರುವ ಎಲ್ಲ ಬಗೆಯ ವಾಹನಗಳ ಚಾಲಕರು 2 ವರ್ಷಗಳಿಗೊಮ್ಮೆ ಪೊಲೀಸರಿಂದ ಪಡೆದ ಸನ್ನಡತೆಯ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲಾ ವಾಹನಗಳಲ್ಲಿ ಚಾಲಕರು, ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ಇದು ಮಕ್ಕಳ ಸುರಕ್ಷತೆಯನ್ನು ಇನ್ನಷ್ಟು ಖಾತ್ರಿಪಡಿಸುತ್ತದೆ ಎಂಬುದು ಪಾಲಕರ ಅಭಿಪ್ರಾಯವಾಗಿದೆ.

ಶಿಕ್ಷಣ ಇಲಾಖೆಯ ಈ ಕ್ರಮ ಸ್ವಾಗತಾರ್ಹ. ಖಾಸಗಿ ಶಾಲೆಗಳಲ್ಲಿ ಚಾಲಕರು ದೀರ್ಘ ಕಾಲ ಕೆಲಸ ಮಾಡಲ್ಲ. ಹೀಗಾಗಿ, ಯಾವುದೇ ವೆಚ್ಚವಿಲ್ಲದೆ ಸನ್ನಡತೆ ಪ್ರಮಾಣಪತ್ರ ನೀಡಬೇಕು ಎಂಬುದು ಖಾಸಗಿ ಶಾಲೆಯ ಮುಖ್ಯಸ್ಥರ ಆಗ್ರಹವಾಗಿದೆ.

ಶಾಲೆಗೆ ಮಕ್ಕಳನ್ನು ಕಳುಹಿಸಲು ಬಹುತೇಕ ಪಾಲಕರು ಸ್ಕೂಲ್ ವ್ಯಾನ್ ಅವಲಂಬಿಸಿದ್ದಾರೆ. ಆದರೆ, ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಶಾಲಾ ವಾಹನ ಶುಲ್ಕ ಹೆಸರಿನಲ್ಲಿ ಸಾವಿರಗಟ್ಟಲೇ ಹಣ ವಸೂಲು ಮಾಡಿದರೂ, ಮಕ್ಕಳ ಸುರಕ್ಷತೆ ಕುರಿತು ನಿರ್ಲಕ್ಷೃ ತೋರುತ್ತಿವೆ. ಹಣ ಉಳಿಸಲು ಸುರಕ್ಷತಾ ಕ್ರಮ ಕಡೆಗೆ ಗಮನ ನೀಡುವುದಿಲ್ಲ ಎಂಬುದು ಪಾಲಕರ ಆರೋಪವಾಗಿದೆ.

ಖಾಸಗಿ ವಾಹನಗಳು ಸುರಕ್ಷಿತವಲ್ಲ

ಮಕ್ಕಳ ಕರೆದುಕೊಂಡು ಹೋಗಲು ಕೆಲ ಪಾಲಕರು ಖಾಸಗಿ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಆದರೆ, ಈ ಖಾಸಗಿ ವಾಹನಗಳಲ್ಲಿ ಯಾವ ಸೌಲಭ್ಯಗಳೂ ಇರಲ್ಲ. ಆಟೋರಿಕ್ಷಾ, ಓಮ್ನಿ ಕಾರ್‌ಗಳಲ್ಲಿ ಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ಹೋಗುತ್ತಾರೆ. ಯಾವುದೇ ಸುರಕ್ಷತಾ ಕ್ರಮವನ್ನೂ ಪಾಲನೆ ಮಾಡುತ್ತಿಲ್ಲ. ಆದರೂ, ಈ ಕುರಿತು ಚಿಂತೆ ಮಾಡದೆ ಕೆಲ ಪಾಲಕರು ತಾವು ನಿಯೋಜಿಸಿಕೊಂಡ ಖಾಸಗಿ ವಾಹನಗಳಲ್ಲೇ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇಂತಹ ವ್ಯಾನ್, ಆಟೋಗಳಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಹತ್ತಿರಕ್ಕೂ ಸುಳಿದಿಲ್ಲ.

ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ


ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳು ಪಾಲನೆಯಾಗುತ್ತಿಲ್ಲ. ಶಾಲಾ ಬಸ್‌ಗಳ ಮುಂದೆ, ಹಿಂದೆ ‘ಮಕ್ಕಳನ್ನು ಕರೆದೊಯ್ಯುತ್ತಿರುವ ವಾಹನ’, ಖಾಸಗಿಯವರೊಂದಿಗೆ ಒಪ್ಪಂದದ ವಾಹನವಾಗಿದ್ದರೆ ‘ಶಾಲಾ ಕರ್ತವ್ಯದಲ್ಲಿ’ ಎಂದು ಬರೆಯಬೇಕು.

ವಾಹನದ ಸೀಟ್‌ಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರುವಂತಿಲ್ಲ. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ವಾಹನದ ಗಾಜಿನ ಕಿಟಕಿ ಆಚೆಗೆ ಕಬ್ಬಿಣದ ಸರಳುಗಳ ರಕ್ಷಣೆ, ಬೆಂಕಿ ನಂದಿಸುವ ಉಪಕರಣ, ವಾಹನದ ಮೇಲೆ ಶಾಲೆ ಹೆಸರು, ದೂರವಾಣಿ ಸಂಖ್ಯೆ ಬರೆದಿರಬೇಕು. ವಾಹನದ ಬಾಗಿಲಿಗೆ ಗುಣಮಟ್ಟದ ಬೀಗದ ವ್ಯವಸ್ಥೆ ಇರಬೇಕು.

ಚಾಲಕನಿಗೆ 5 ವರ್ಷಗಳ ಚಾಲನಾ ಅನುಭವ ಇರಬೇಕು. ರಸ್ತೆ ಅಪರಾಧದ ಪ್ರಕರಣಗಳು ಇರಬಾರದು. ಸೀಟಿನ ಕೆಳಭಾಗದಲ್ಲಿ ಶಾಲಾ ಬ್ಯಾಗ್ ಇಟ್ಟುಕೊಳ್ಳಲು ಸ್ಥಳಾವಕಾಶ, ವಾಹನಗಳಲ್ಲಿ ಮಕ್ಕಳ ರಕ್ಷಣೆಗೆ ಸಿಬ್ಬಂದಿಯನ್ನು ನೇಮಿಸಬೇಕು ಎಂಬ ನಿರ್ದೇಶನ ಇದೆ. ಆದರೆ, ಇದು ಬಹುತೇಕ ಕಡೆ ಜಾರಿಯಾಗಿಲ್ಲ.

ಮಕ್ಕಳ ಸುರಕ್ಷತೆ ಕುರಿತು ಈಗಾಗಲೇ ಇಲಾಖೆಯಿಂದ ಬಂದಿರುವ ಸುತ್ತೋಲೆ, ಮಾರ್ಗಸೂಚಿಗಳನ್ನು ಕಳುಹಿಸಿಕೊಡಲಾಗಿದೆ. ಇದನ್ನು ಪಾಲನೆ ಮಾಡುವಂತೆ ಎಲ್ಲ ಶಾಲೆಗಳಿಗೂ ಸೂಚನೆ ನೀಡಲಾಗಿದೆ. ಇದನ್ನು ಜಾರಿ ಮಾಡಲು ಇಲಾಖೆಯಿಂದ ಅಗತ್ಯ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ.
ಎಚ್.ಕೆ.ಪಾಂಡು
ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net