ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಇಲ್ಲ

Published on

ಬಳ್ಳಾರಿ : ಸಂಡೂರು ಹಾಗೂ ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು ಇಲ್ಲ. ಕ್ಷೇತ್ರಕ್ಕೆ ಆಧಾರವಾಗಿರುವುದೆ ಕಾಂಗ್ರೆಸ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

ಸಂಡೂರಿನ ತಿಮ್ಮಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಪರ ಪ್ರಚಾರ ನಡೆಸಿ ಮಾತನಾಡಿದರು. ಸಂಸದ ಈ. ತುಕಾರಾಮ್ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಾಗಿ ನಾಲ್ಕು ಬಾರಿ ಸತತವಾಗಿ ಗೆದ್ದಿದ್ದಾರೆ. ಆ ಸ್ಥಾನಕ್ಕೆ ಅನ್ನಪೂರ್ಣಗೆ ಅವಕಾಶ ನೀಡಿದೆ. ಶಾಸಕ ಜನಾರ್ದನ ರೆಡ್ಡಿಯಿಂದ ಇಡೀ ಜಿಲ್ಲೆ ಹಾಗೂ ರಾಜ್ಯಕ್ಕೆ ಯಾವ ಪರಿಸ್ಥಿತಿ ಬಂತು ಎಂಬುದು ಗೊತ್ತಿದೆ ಎಂದರು. ಕನಕಪುರದಲ್ಲಿ ಮಾಡಿದ ಕೆಲಸಕ್ಕಿಂತ ಹೆಚ್ಚ ಕೆಲಸ ತುಕಾರಾಮ್ ಮಾಡಿದ್ದಾರೆ. 371 ಜೆ ಕೊಟ್ಟು ವಿಶೇಷ ಪ್ಯಾಕೇಜ್‌ ಕ್ಷೇತ್ರಕ್ಕೆ ಕಾಂಗ್ರೆಸ್‌ ಕೊಟ್ಟಿದೆ. ಹಿಂದುಳಿದ ಪ್ರದೇಶಗಳ ಜನರಿಗೆ ದೊಡ್ಡ ಶಕ್ತಿ ಸಿಕ್ಕಿದೆ. ದೇವರು ವರ ಮತ್ತು ಶಾಪ ಕೊಡೋದಿಲ್ಲ ಆದರೆ ಅವಕಾಶ ಕೊಡುತ್ತಾನೆ. ತುಕಾರಾಮ್ ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ. ಸಂಡೂರು ಚೀನಾದ ಬೀಜಿಂಗ್ ಮಾಡಲ್ಲ ಕೇವಲ ಕ್ಷೇತ್ರ ಅಭಿವೃದ್ಧಿ ‌ಮಾಡುತ್ತವೆ ಎಂದು ರೆಡ್ಡಿಗೆ ತಿರುಗೇಟು ನೀಡಿದರು. ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ‌ಮಾಡುತ್ತಿದೆ. ರಾಜ್ಯದ ಯಾವ ರೈತರ ಭೂಮಿ ಕಸಿಯಲ್ಲ ಎಂದರು. ಸಚಿವರಾದ ಸಂತೋಷ್ ಲಾಡ್, ಡಿ. ಸುಧಾಕರ್, ಸಂಸದ ಈ. ತುಕಾರಾಮ್, ಶಾಸಕರಾದ ಬಿ. ನಾಗೇಂದ್ರ, ಜೆ.ಎನ್. ಗಣೇಶ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net