ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಿಂದ ಯಾವುದೇ ಪ್ರಯೋಜನವಿಲ್ಲ : ಎಚ್.ವಿಶ್ವನಾಥ್ ಟೀಕೆ

Oplus_131072
Oplus_131072
Published on

ಮೈಸೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿರುವ ಸಚಿವ ಸಂಪುಟ ಸಭೆಯಿಂದ ಯಾವುದೇ ಪ್ರಯೋಜ ನವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಟೀಕಿಸಿದರು.

ಈ ಹಿಂದೆ ಬೇರೆ ಕಡೆ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ಸಭೆಗಳನ್ನು ನಡೆಸಿದ್ದರು. ಆದರೆ, ಫಲಿತಾಂಶ ಮಾತ್ರ ಶೂನ್ಯ. ಜನರ ಮುಂದೆ ತೋರಿಸಿಕೊಳ್ಳಲು ಇಂತಹ ಒಂದು ಗಿಮಿಕ್ ಮಾಡಲಾಗಿದೆ. ಈ ಸಚಿವ ಸಂಪುಟ ಸಭೆಯು ದುಂದುವೆಚ್ಚದಿಂದ ಕೂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿಗೆ 93 ಕೋಟಿ ರೂ.ನೀಡಲಾಗುವುದು ಎಂದು ಘೋಷಿಸಲಾಗಿದೆ. ಆರತಿ ಬೆಳಗಲು ಅಷ್ಟೊಂದು ಖರ್ಚಾಗುತ್ತದೆಯೇ? ಇಂತಹ ಯೋಜನೆಗಳಿಂದ ಅಧಿಕಾರಿಗಳು ಹಣ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರವಾಸೋದ್ಯಮ ಇಲಾಖೆ ಸುಪರ್ದಿಯಲ್ಲಿದ್ದ ಕೆಆರ್‌ಎಸ್ ಬೃಂದಾವನವನ್ನು ನೀರಾವರಿ ಇಲಾಖೆಗೆ ಹಸ್ತಾಂತರ ಮಾಡಿದ ನಂತರ ಅಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. 2013ರಲ್ಲಿ ಸಿದ್ದರಾಮಯ್ಯ ರಾಯಲ್ ರೀಜನಲ್ ಟೂರಿಸಂ ಅಥಾರಿಟಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ, ಇದೀಗ ಅದರ ಬಗ್ಗೆ ಚರ್ಚೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಶ್ಮೀರ ಹಾಗೂ ಕೊಡಗು ಜಗತ್ತಿನ ಉತ್ತಮ ಪ್ರವಾಸಿ ಸ್ಥಳಗಳು ಎಂದು ಗುರುತಿಸಿಕೊಂಡಿವೆ. ಆದರೆ, ಸಂಪುಟ ಸಭೆಯಲ್ಲಿ ಕೊಡಗಿಗೆ ಯಾವುದೇ ಅನುದಾನ ಘೋಷಣೆ ಮಾಡಿಲ್ಲ. ಇಲವಾಲ ಹೋಬಳಿಯ ಹುಯಿಲಾಳಿನಲ್ಲಿ ಅಂತಾರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಲು ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ. ಕ್ರೀಡೆ ಮತ್ತು ಪ್ರವಾಸೋದ್ಯಮ ರಾಜ್ಯ ಹಾಗೂ ದೇಶದ ಆರ್ಥಿಕತೆಗೆ ಬಲ ನೀಡುತ್ತದೆ ಎಂದರು.

ಕಾಶ್ಮೀರ ಗಡಿಯಲ್ಲಿ ಭಯೋತ್ಪಾದಕರ ನುಸುಳುವಿಕೆ ತಡೆಯಬೇಕು. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುತ್ತೇವೆ ಎಂದು ಹೇಳಲಾಗಿತ್ತು. ಈಗ ಅದು ಏನಾಗಿದೆ? ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net