

ಸೋಮವಾರಪೇಟೆ: ಮೇ ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ಕೆರೆಗಳು ತುಂಬಿವೆ. ತಡೆಗೋಡೆ ಇಲ್ಲದ ಕೆರೆ ದಡದ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಮತ್ತು ತಿರುಗಾಡಲು ಜನರು ಭಯಪಡುವಂತಾಗಿದೆ.
ತಾಲೂಕಿನಲ್ಲಿ 200 ಕೆರೆಗಳು ತುಂಬಿದ್ದು, ಬಹುತೇಕ ಕೆರೆಯ ದಡದಲ್ಲಿ ತಡೆಗೋಡೆಗಳು ಇಲ್ಲ. ಅನೇಕ ಕೆರೆಗಳಲ್ಲಿ ಹೂಳು ತೆಗೆದಿರುವುದರಿಂದ ಆಳವಾಗಿವೆ. ಗ್ರಾಮಗಳಲ್ಲಿರುವ ಕೆರೆ ದಡದ ಮೇಲಿನ ರಸ್ತೆಗಳಲ್ಲಿ ನಿತ್ಯ ಶಾಲಾ ವಾಹನ, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಇಂಥ ರಸ್ತೆಯಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹಾಗೂ ಸೈಕಲ್ ಏರಿ ಶಾಲೆಗಳಿಗೆ ತೆರಳುತ್ತಾರೆ. ಈ ಕಾರಣದಿಂದ ಜನರಲ್ಲಿ ಆತಂಕ ಎದುರಾಗಿದೆ.
ಸಮೀಪದ ಯಡೂರು ಗ್ರಾಮದ ಊರ ಕೆರೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮಲ್ಲಳ್ಳಿ ಹಾಗೂ ಪುಷ್ಪಗಿರಿ ಪ್ರವಾಸಿ ತಾಣಗಳಿಗೆ ಹೋಗಲು ಈ ಕೆರೆಯ ತಟದಲ್ಲೇ ತೆರಳಬೇಕು. ಶಾಂತಳ್ಳಿ ಹೋಬಳಿಯ ಸುಮಾರು ಇಪ್ಪತ್ತು ಗ್ರಾಮಗಳ ನಿವಾಸಿಗಳು ಇದೇ ರಸ್ತೆಯಲ್ಲೇ ಸಂಚರಿಸಬೇಕು. ಶ್ರೀಕೇತ್ರ ಕುಕ್ಕೆ ಸುಬ್ರಹ್ಮಣ್ಯ, ಸಕಲೇಶಪುರ, ಮಂಗಳೂರಿಗೆ ತೆರಳುವವರು ಕೆರೆ ತಟದಲ್ಲಿರುವ ರಸ್ತೆಯ ಮೇಲೆ ಸಂಚರಿಸಬೇಕಾಗಿದೆ. ಐದಾರು ಶಾಲಾ ಬಸ್‌ಗಳು, ಮಕ್ಕಳನ್ನು ಕರೆದೊಯ್ಯುವ ಖಾಸಗಿ ವ್ಯಾನ್‌ಗಳು. ಖಾಸಗಿ ಬಸ್‌ಗಳು, ಕಾರ್ಮಿಕರನ್ನು ಕರೆದೊಯ್ಯುವ ವಾಹನಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
ಆದರೆ ಇದುವರೆಗೆ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಿಲ್ಲ. ಲೋಕೋಪಯೋಗಿ ಇಲಾಖೆ ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಅರ್ಜಿ ಸಲ್ಲಿಸಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಉದ್ಯಮಿ ಹರಪಳ್ಳಿ ರವೀಂದ್ರ ಅವರು ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಲಿ ಎಂದು ಸ್ವಂತ ಖರ್ಚಿನಿಂದ ಹೂಳು ತೆಗೆಸಿದರು. ಈ ಕಾರಣದಿಂದ ಆಳವಾದ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದೆ. ಮಳೆಗಾಲದಲ್ಲಿ ಕೆರೆ ಉಕ್ಕಿ ಹರಿಯುವಾಗ ರಸ್ತೆ ಯಾವುದು, ಕೆರೆಯ ನೀರು ಯಾವುದು ಎಂಬುದು ಪ್ರವಾಸಿಗರಿಗೆ ಗೊತ್ತಾಗುವುದಿಲ್ಲ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಪ್ರವಾಸಿಗರು ತಬ್ಬಿಬ್ಬಾದರೆ ಜಲಸಮಾಧಿಯಾಗಬೇಕಾಗುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಕಳೆದ ವರ್ಷ ದುರಂತವೊಂದು ತಪ್ಪಿದೆ. ಮಹಿಳಾ ಕಾರ್ಮಿಕರು ವ್ಯಾನ್‌ನಲ್ಲಿ ಕೆರೆ ಏರಿಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಎದುರಿಗೆ ಬರುತ್ತಿದ್ದ ವಾಹನವನ್ನು ತಪ್ಪಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಕೆರೆಗೆ ಮಗುಚಿ ಬಿದ್ದಿತ್ತು. ವ್ಯಾನ್ ಮಗುಚಿಕೊಂಡ ಸ್ಥಳದಲ್ಲಿ ಸಮತಟ್ಟಿನಿಂದ ನಾಲ್ಕೈದು ಅಡಿಯಷ್ಟು ನೀರಿದ್ದ ಪರಿಣಾಮ ವಾಹನ ಮುಳುಗದೆ ಅನಾಹುತ ತಪ್ಪಿದೆ.
ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಯಡೂರು ಕೆರೆ ತುಂಬಿದೆ. ಕೆರೆ ಹೂಳು ತೆಗೆದಿರುವ ಕಾರಣ ನೀರಿನ ಸಂಗ್ರಹ ಜಾಸ್ತಿಯಾಗಿದೆ. ತಡೆಗೋಡೆ ನಿರ್ಮಾಣ ಮಾಡಲು ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಅನಾಹುತವಾದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಮೊದಲೇ ಎಚ್ಚರ ವಹಿಸಬೇಕು. ಎ.ಸಿ.ಲಿಖಿತ್ ಕೃಷಿಕ, ಯಡೂರು ಗ್ರಾಮ