

ನಂಜನಗೂಡು: ಪಟ್ಟಣದ ಆರ್‌ಪಿ ರಸ್ತೆಯಲ್ಲಿರುವ ರೈಲ್ವೇ ಗೇಟ್ ಬಳಿ ಹುಲ್ಲಹಳ್ಳಿ ನಾಲೆಗೆ ತಡೆಗೋಡೆ ಇಲ್ಲದೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಹುಲ್ಲಹಳ್ಳಿ ವೃತ್ತ, ಗುಂಡ್ಲುಪೇಟೆ, ಮೈಸೂರು, ನಂಜುಂಡೇಶ್ವರ ದೇವಾಲಯ, ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ಪಕ್ಕದಲ್ಲೇ ಸಿನಿಮಾ ಮಂದಿರ, ಶಾಲಾ-ಕಾಲೇಜುಗಳು, ತರಕಾರಿ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು ಇವೆ. ಸೂಕ್ತ ತಡೆಗೋಡೆ ಇಲ್ಲದೆ ನಿತ್ಯ ನೂರಾರು ವಾಹನ ಸವಾರರು ಭಯದಲ್ಲೇ ಓಡಾಡಬೇಕಾಗಿದೆ.
ನಾಲೆ ನಿರ್ಮಾಣ ಮಾಡಿದ ಸಂದರ್ಭದಿಂದಲೂ ಸೇತುವೆಯ ಪಕ್ಕದಲ್ಲಿರುವ ಜಾಗಕ್ಕೆ ತಡೆಗೋಡೆ ನಿರ್ಮಿಸದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಇತ್ತೀಚಿನ ದಿನಗಳಲ್ಲಿ ನಂಜನಗೂಡು ಪಟ್ಟಣದಲ್ಲಿ ಸಂಚಾರ ದಟ್ಟಣೆ ಮಿತಿಮೀರಿದೆ. ಈಗಲಾದರೂ ಈ ಬಗ್ಗೆ ಗಮನಹರಿಸಿ ತಡೆಗೋಡೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.