ಬಿಜೆಪಿಯಲ್ಲಿ ಕಿರುಕುಳ ವಾತಾವರಣ ಇಲ್ಲ: ಸೋಮಶೇಖರ್

st somashekhar
Published on

ಮೈಸೂರು: ಬಿಜೆಪಿಯಲ್ಲಿ ಕಿರುಕುಳ ನೀಡುವ ವಾತಾವರಣ ಇಲ್ಲ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ’ ಎಂಬ ಶಾಸಕ ಎಸ್.ಎ.ರಾಮದಾಸ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ರಾಮದಾಸ್ ಹಿರಿಯ ನಾಯಕರು. ತಮ್ಮ ಸುದೀರ್ಘ ರಾಜಕಾರಣದಲ್ಲಿ ಅವರು ಯಾರಿಗೂ ಕಿರುಕುಳ ನೀಡಿಲ್ಲ. ಅಂದಮೇಲೆ ಅವರಿಗೆ ಯಾರು ಕಿರುಕುಳ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವರೂ ಹಾಗೂ ಅನುಭವಿ ರಾಜಕಾರಣಿಯೂ ಆಗಿರುವ ರಾಮದಾಸ್ ಅವರ ಮನಸ್ಸು ನೋಯಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ನಾನು ಬಿಜೆಪಿಗೆ ಬಂದು ಮೂರು ವರ್ಷವಾಗಿದೆ. ನಾನು ಕಂಡಂತೆ ಇಲ್ಲಿ ಕಿರುಕುಳದ ವಾತಾವರಣ ಇಲ್ಲ. ಪಕ್ಷದಲ್ಲಿ ರಾಮದಾಸ್ ನನಗಿಂತ ಹಳೆಯ ನಾಯಕರಾಗಿದ್ದು, ಈ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.

ವಿವಾದ ಶೀಘ್ರ ಇತ್ಯರ್ಥ:
ಮೈಸೂರಿನ ಬಸ್ ತಂಗುದಾಣದ ವಿವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ಹೋಗಿದೆ. ಮುಖ್ಯಮಂತ್ರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.
ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಪಟ್ಟಿಗೆ ಹೆಸರು ಸೇರಿಸುವುದು ಮತ್ತು ಕೈಬಿಡುವುದು ನಿರಂತರ ಪ್ರಕ್ರಿಯೆ. ಇಂದು ಈ ಬಡಾವಣೆಯಲ್ಲಿ ಇರುವವರು ಮುಂದೆ ಬೇರೆ ಪ್ರದೇಶಕ್ಕೆ ಹೋಗುತ್ತಾರೆ. ಆಗ ಮತಪಟ್ಟಿಯಲ್ಲಿ ಬದಲಾವಣೆ ಮಾಡಿಸಿಕೊಳ್ಳುತ್ತಾರೆ. ಈ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಉತ್ತರ ನೀಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಎಷ್ಟು ಹೊಸ ಮತದಾರರು ಸೇರಿದ್ದಾರೆ, ಎಷ್ಟು ಮತದಾರರನ್ನು ತೆಗೆಯಲಾಗಿದೆ ಎಂಬುದನ್ನು ತಿಳಿಸಿದ್ದಾರೆ ಎಂದರು.


ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಲು ಕಾಂಗ್ರೆಸ್ ನಾಯಕರಿಗೆ ಏನೂ ಕಾಣುತ್ತಿಲ್ಲ. ಸದ್ಯ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಕುಂಟು ನೆಪ ಹೇಳಿಕೊಂಡು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಯಾವ ಆಟವೂ ನಡೆಯುವುದಿಲ್ಲ ಎಂದರು.
ಮಂಗಳೂರಿನ ಸ್ಫೋಟ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನಗರ ಪೊಲೀಸ್ ಆಯುಕ್ತರು ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಮೈಸೂರಿನಲ್ಲೂ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಂಗಳೂರಿನಲ್ಲೂ ಬಿಗಿ ಭದ್ರತೆ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net