

ಎನ್.ಆರ್.ಪುರ: ರೈತರು ಹಾಗೂ ಒತ್ತುವರಿದಾರರ ಗಮನಕ್ಕೆ ಬಾರದೆ ಯಾವುದೇ ಭೂಮಿಯನ್ನು ಸೆಕ್ಷನ್ 4ಗೆ ಸೇರಿಸುವುದಿಲ್ಲ ಎಂದು ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ತಿಳಿಸಿದರು.
ಕಡಹಿನಬೈಲು ಗ್ರಾಪಂನಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ಕಡಹಿಬೈಲು ಗ್ರಾಮದ ಸರ್ವೇ ನಂ.109,77, 83,110, 81ಹಾಗೂ 40ರಲ್ಲಿನ 298.25 ಭೂ ಪ್ರದೇಶವನ್ನು ಅರಣ್ಯ ಇಲಾಖೆ ಬ್ಲಾಕ್1.4 ಎಂದು ಅಧಿಸೂಚಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರ ಅಭಿಪ್ರಾಯ ಪಡೆಯಲು ವಿಶೇಷ ಗ್ರಾಮಸಭೆ ಕರೆಯಲಾಗಿದೆ. ಈಗಾಗಲೇ ಅಧಿಸೂಚಿಸುತ್ತಿರುವ ಭೂ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವ ರೈತರು ಕಡೂರಿನಲ್ಲಿರುವ ಫಾರೆಸ್ಟ್ ಸೆಟ್ಲ್‌ಮೆಂಟ್ ಆಫೀಸರ್‌ಗೆ ದೂರು ನೀಡಬೇಕು. ನಂತರ ಸ್ಥಳ ತನಿಖೆ ಮಾಡಿ, ಮನೆ ಕಟ್ಟಿಕೊಂಡ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಸೆಕ್ಷನ್ 4ಗೆ ಸೇರಿಸುತ್ತಾರೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿಗ್ರಾಮ ನಾಗರಾಜು ಮಾತನಾಡಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ತಮ್ಮ ತಮ್ಮ ಇಲಾಖೆ ಜಾಗ ಯಾವುದು ಎಂಬ ಗೊಂದಲದಲ್ಲಿದ್ದಾರೆ. ಮೊದಲು ಎರಡೂ ಇಲಾಖೆಯವರು ಸೇರಿ ಜಂಟಿ ಸರ್ವೇ ನಡೆಸಿ ತಮ್ಮ ತಮ್ಮ ಜಾಗದ ಗಡಿ ಗುರುತಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಎ.ಬಿ.ಮಂಜುನಾಥ್, ಚಂದ್ರಶೇಖರ್, ಶೈಲಾ ಮಹೇಶ್, ವಾಣಿ ನರೇಂದ್ರ, ಲಿಲ್ಲಿ ಮಾಥುಕುಟ್ಟಿ, ಪೂರ್ಣಿಮಾ, ಮುಖಂಡರಾದ ಎಲ್ದೋ, ಎಲ್.ನಾಗರಾಜ್, ಡಿ.ಜಿ.ಸತೀಶ್,ಎ.ಬಿ.ಪ್ರಶಾಂತ್, ಉಪವಲಯ ಅರಣ್ಯಾಧಿಕಾರಿ ಗೌಸ್ ಮೊಹಿಯುದ್ದಿನ್, ಗ್ರಾಮಸ್ಥರಾದ ಡಿ.ಜಿ.ಸೋಮಣ್ಣ, ಪಿಡಿಒವಿಂದ್ಯಾ ಇದ್ದರು.