

ಶಿರಸಿ: ನಾವೆಷ್ಟೇ ಕಾಳಜಿ ವಹಿಸಿದರೂ ಸಮಾಜದಲ್ಲಿ ಜಾತಿಗಳ ನಡುವೆ ಭಿನ್ನಾಭಿಪ್ರಾಯಗಳು ಜಾಸ್ತಿ ಆಗುತ್ತಲೇ ಇವೆ. ಈ ಜಾತಿ ಜಾತಿ ನಡುವೆ ಇರುವ ಅಂತರ ಕಡಿಮೆ ಮಾಡಬೇಕೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೊಂದೇ ಮಾರ್ಗ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಇಂದಿರಾನಗರದ ಯೂನಿಯನ್ ಪ್ರೌಢ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 169 ಉರ್ದು ಪ್ರಾಥಮಿಕ, 150 ಪ್ರೌಢ ಶಾಲೆಗಳಿವೆ. ಇಂದಿನ ವಾತಾವರಣದಲ್ಲಿ ಶಿಕ್ಷಣ ಅತಿ ಪ್ರಮುಖ. ಇರುವ ವ್ಯವಸ್ಥೆಯನ್ನು ತಿದ್ದಲು ಶಿಕ್ಷಣವೊಂದೇ ದಾರಿ. ಮುಂದಿನ ಪೀಳಿಗೆಯಲ್ಲೂ ಇದೇ ವ್ಯವಸ್ಥೆ ಒಯ್ದರೆ ನಾವು ಮನುಷ್ಯರಾಗಿ ಇರುವುದಿಲ್ಲ. ಈಗಲೇ ನಾವು ಕಾಳಜಿ ವಹಿಸಬೇಕಿದೆ. ಶಿವಮೊಗ್ಗದ ಕೆಲ ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳು ಶ್ಲೋಕಗಳನ್ನೂ ಅಭ್ಯಾಸ ಮಾಡುತ್ತಿದ್ದು, ಉತ್ತಮ ಬೆಳವಣಿಗೆ ಎಂದರು.
ಶಾಲೆಯ ಪ್ರಮುಖರಾದ ಜಬಿವುಲ್ಲಾ ಖಾನ್, ವೈ ಸಯ್ಯದ್ ಅಹಮ್ಮದ್, ನಗರಸಭೆ ಸದಸ್ಯೆ ಪ್ರಿಯಾ ನಾಯ್ಕ, ಇನಾಯತುಲ್ಲಾ ಶಾಬಂದ್ರಿ, ದೀಪಕ ದೊಡ್ಡೂರು, ಅಬುಜರ್ ಇಸಾಕ್, ಅಬ್ದುಲ್ ಕರೀಂ, ಇಕ್ಬಾಲ್ ಬಿಳಗಿ ಇತರರಿದ್ದರು.